ಬೆಳ್ತಂಗಡಿ: ಕರ್ನಾಟಕದಾದ್ಯಂತ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರೂ ನಂಬುವಂತಹ ದೈವ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟು ವಿಕೃತಿ ಮೆರೆದ ಘಟನೆ ವೇಣೂರು ಸನಿಹದ ಬಾಡಾರುವಿನಲ್ಲಿ ನಡೆದಿದ್ದು, ವೇಣೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಡಾರಿನ ಕೊರಗಕಲ್ಲು ಎಂಬಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ವಿಚಾರದಲ್ಲಿ ಕೊರಗಜ್ಜ ಸಮಿತಿ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ವಿವಾದವಿತ್ತು ಎಂದು ಪ್ರಕರಣದ ವೇಳೆ ಬಹಿರಂಗವಾಗಿದೆ.
ಮಂಗಳವಾರ ಮಧ್ಯಾಹ್ನದ ವೇಳೆ ಕೊರಗಜ್ಜನ ಗುಡಿಗೆ ಬೆಂಕಿ ಬಿದ್ದಿದೆ. ಗುಡಿಯ ಮೇಲೆ ಹಾಕಲಾಗಿದ್ದ ತೆಂಗಿನ ಮಡಲಿನ ಚಪ್ಪರಕ್ಕೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದು, ಸರಕಾರಿ ಜಮೀನಿನಲ್ಲಿ ಇದ್ದ ಕೊರಗಜ್ಜನ ಕಟ್ಟೆಯ ಬಗ್ಗೆ ಸಮಿತಿ ಹಾಗೂ ಸ್ಥಳೀಯರಾದ ಹರೀಶ್, ಡಾ.ರಾಜೇಶ್ ಹಾಗೂ ಇತರರ ನಡುವೆ ವಿವಾದವಿತ್ತೆನ್ನಲಾಗಿದೆ.

ಇಲ್ಲಿ ಹರೀಶ್ ನೇತೃತ್ವದಲ್ಲಿ ಪ್ರತ್ಯೇಕ ಕೊರಗಜ್ಜನ ಗುಡಿ ನಿರ್ಮಾಣ ಮಾಡಲಾಗಿದ್ದು, ಸಮಿತಿಯವರು ತಾತ್ಕಾಲಿಕ ಗುಡಿಯನ್ನು ನಿರ್ಮಿಸಿ ಆರಾಧನೆ ನಡೆಸುತ್ತಿದ್ದರು.
ಈ ಬಗ್ಗೆ ಅವರು ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಹರೀಶ್ ಪೂಜಾರಿ ಎಂಬಾತ ಸ್ಥಳೀಯರಾದ ಡಾ. ರಾಜೇಶ್, ರಮೇಶ್, ಓಂಪ್ರಕಾಶ್ ಮತ್ತು ಪ್ರಶಾಂತ್ ಎಂಬವರ ಕುಮ್ಮಕ್ಕಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರುತ್ತಾರೆ ಎಂದು ಪ್ರದೀಪ್ ಕುಮಾರ್ ಹೆಗ್ಡೆ ದೂರು ನೀಡಿದ್ದಾರೆ.
ದೂರಿನ ಹಿನ್ನಲೆಯಲ್ಲಿ ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.