ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ವಿವಾದದ ಹಿಂದೆ ವಿದ್ಯಾರ್ಥಿಗಳ ನಡುವಿನ ಸಾಮರಸ್ಯದ ಹಿನ್ನಲೆಯಿದೆ. ವಾಶ್ ರೂಂ ನಂತಹ ತೀರಾ ಖಾಸಗಿ ಸ್ಥಳದಲ್ಲಿ ಫೋಟೋ/ವಿಡಿಯೋ ತೆಗೆಯುವ ಮಕ್ಕಳಾಟ ಮಾಡುವುದು ತಪ್ಪಾದರೂ, ಇದರ ಹಿಂದೆ ವಿದ್ಯಾರ್ಥಿನಿಯರ ನಡುವಿನ ಅಪರಿಮಿತ ಸ್ನೇಹದ ಕತೆಯೊಂದಿದೆ.
ಉಡುಪಿಯ ನೇತ್ರಾ ಜ್ಯೋತಿ ಕಾಲೇಜಿನಲ್ಲಿ ಓದುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ನಾಲ್ವರು ಹಿಂದೂ ವಿದ್ಯಾರ್ಥಿನಿಯರದ್ದೇ ಒಂದು ಅತ್ಯಂತ ಆಪ್ತವಾದ ಗೆಳತಿಯರ ಬಳಗವಾಗಿತ್ತು. ಎಲ್ಲಾ ಕಾಲೇಜುಗಳಲ್ಲಿ ಇರುವಂತೆ ಗೆಳತಿಯರ ಈ ಗುಂಪು ತುಂಟಾಟಗಳನ್ನು ಮಾಡುತ್ತಿರುತ್ತದೆ. ಪರಸ್ಪರ ಊಟ, ತಿಂಡಿ ಹಂಚಿಕೊಳ್ಳುವುದರಿಂದ ಹಿಡಿದು ತೀರಾ ಖಾಸಗಿ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವವರೆಗೆ ಆತ್ಮೀಯರಾಗಿದ್ದ ವಿದ್ಯಾರ್ಥಿನಿಯರ ಗುಂಪು ಅದಾಗಿತ್ತು. ತನ್ನ ಗುಂಪಿನಿನಲ್ಲಿದ್ದ ಗೆಳತಿಯನ್ನು ಪರಸ್ಪರ ಗೋಳೊಯ್ದುಕೊಳ್ಳುತ್ತಿದ್ದಾಗ ಅವರು ಹಿಂದುವೋ ಮುಸ್ಲೀಮರೋ ಎಂಬ ಪರಿವೆಯೇ ಈ ಗೆಳತಿಯರ ಗುಂಪಿಗೆ ಇರುತ್ತಿರಲಿಲ್ಲ. ಈ ಗುಂಪಿನಲ್ಲಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್, ಬುರ್ಕಾದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ಮಾಡುವ ಕೀಟಲೆಗಳು, ಆತ್ಮೀಯ ಕ್ಷಣಗಳನ್ನು ಅವರದ್ದೇ ಗುಂಪಿನ ಹಿಂದೂ ವಿದ್ಯಾರ್ಥೀನಿಯರು ಫೋಟೋ, ವಿಡಿಯೋ ಮಾಡಿ ಕೀಟಲೆ ಮಾಡಿದ್ದೂ ಇದೆ. ಅಷ್ಟೊಂದು ಆತ್ಮೀಯ ಗೆಳತಿಯರ ಗುಂಪು ಅದಾಗಿತ್ತು.
ಅವತ್ತು ಜುಲೈ 20. ಇದೇ ಹಿಂದೂ ಮುಸ್ಲಿಂ ಗೆಳತಿಯರ ಗುಂಪು ಜೊತೆಯಾಗಿಯೇ ಕೀಟಲೆ ಮಾಡುತ್ತಾ ವಾಶ್ ರೂಂಗೆ ಹೋಗಿದೆ. ಉಡುಪಿ ನೇತ್ರಾ ಕಾಲೇಜು ವಾಶ್ ರೂಂ ನಲ್ಲಿ ಹಲವು ಟಾಯ್ಲೆಟ್ ಗಳಿವೆ. ಗೆಳತಿಯರ ಗುಂಪಿನ ಒಬ್ಬ ವಿದ್ಯಾರ್ಥಿನಿ ಟಾಯ್ಲೆಟ್ ನ ಒಳ ಹೋಗಿ ಕಮೋಡಿನಲ್ಲಿ ಕುಳಿತು ಎದ್ದಿದ್ದಾಳೆ. ಹೊರಗಿದ್ದ ವಿದ್ಯಾರ್ಥಿನಿಯೊಬ್ಬಳು ಬಾಗಿಲಿನ ಮೇಲ್ಗಂಡೆಯಿಂದ ತಮಾಷೆಗಾಗಿ ಮೊಬೈಲ್ ನಲ್ಲಿ ಫೋಟೋ ತೆಗೆದಿದ್ದಾಳೆ. ಹೊರ ಬಂದ ಬಳಿಕ ಅದನ್ನು ಅವಳಿಗೇ ತೋರಿಸಿ ಕಾಲೆಳೆಯುವುದಷ್ಟೇ ಆ ಮಕ್ಕಳಾಟದ ಉದ್ದೇಶವಾಗಿತ್ತು.
ಆದರೆ ಆಕೆ ಟಾಯ್ಲೆಟ್ ನಿಂದ ಹೊರ ಬಂದಾಗ ಈ ಗೆಳತಿಯರ ಗುಂಪಿಗೆ ಶಾಕ್ ಆಗಿತ್ತು. ಟಾಯ್ಲೆಟ್ ನಿಂದ ಹೊರ ಬಂದವಳು ತನ್ನ ತರಗತಿಯ ಗೆಳತಿಯೇ ಆಗಿದ್ದರೂ ಇವರ ತಂಡದ ಆತ್ಮೀಯ ಗೆಳತಿಯರಾಗಿರಲಿಲ್ಲ. ಇವರು ಯಾರ ಫೋಟೋ ತೆಗೆಯಬೇಕಿತ್ತೋ ಅವಳು ಮತ್ತೊಂದು ಟಾಯ್ಲೆಟ್ ನಿಂದ ಹೊರ ಬರುತ್ತಿದ್ದಳು.
ಫೋಟೋ ತೆಗೆದ ಮುಸ್ಲಿಂ ವಿದ್ಯಾರ್ಥಿನಿ ತನ್ನ ಯಡವಟ್ಟನ್ನು ತನ್ನ ಹಿಂದೂ ಗೆಳತಿಗೆ ವಿವರಿಸಿದಳು. “ನಿನ್ನ ಫೋಟೋವನ್ನು ತೆಗೆಯಲು ಹೋಗಿ ನಾನು ನಮ್ಮ ತರಗತಿಯ ಇನ್ನೊಬ್ಬಳ ಫೋಟೋ ತೆಗೆದೆ. ಈಗ ಏನು ಮಾಡೋದು ? ಅವಳಿಗೆ ಗೊತ್ತಾದರೆ ಬೇಜಾರು ಆಗಬಹುದು” ಎಂದು ನೊಂದುಕೊಂಡಿದ್ದಾಳೆ.
ಆ ಹಿಂದೂ ವಿದ್ಯಾರ್ಥಿನಿ ಫೋಟೋ ತೆಗೆದ ಮುಸ್ಲಿಂ ಗೆಳತಿಯನ್ನು ಸಮಾದಾನಿಸಿ, ಧೈರ್ಯ ತುಂಬಿ, “ನೀನು ಯಾರ ಫೋಟೋ ತೆಗೆದಿದ್ದಿಯೋ ಆ ವಿದ್ಯಾರ್ಥಿನಿಯನ್ನು ನಾವು ಭೇಟಿಯಾಗಿ ಸಾರಿ ಕೇಳೋಣಾ. ತಪ್ಪಾಯ್ತು ಎಂದು ಹೇಳಿ ಫೋಟೋ ಡಿಲೀಟ್ ಮಾಡೋಣಾ” ಎಂದು ಹೇಳಿ ಹಿಂದೂ ವಿದ್ಯಾರ್ಥಿನಿ ಗೆಳತಿಯೇ ಆ ಯುವತಿಯನ್ನು ಭೇಟಿ ಮಾಡಿ ಸಾರಿ ಕೇಳುತ್ತಾಳೆ. ಆ ನಂತರ ಫೋಟೋವನ್ನು ಡಿಲೀಟ್ ಮಾಡುತ್ತಾರೆ.
ಆ ಫೋಟೋದಲ್ಲಿ ಹಿಂದುತ್ವ ಸಂಘಟನೆಗಳು ಊಹಿಸಿದ್ದ ಅಂತದ್ದೇನೂ ಇರಲಿಲ್ಲ. ಕಮೋಡ್ ಮುಂದೆ ಯೂನಿಫಾರಂನಲ್ಲಿ ನಿಂತಿರುವ ವಿದ್ಯಾರ್ಥಿನಿಯ ಮುಖ ಮತ್ತು ಬೆನ್ನು ಕಾಣುತ್ತಿತ್ತು. ಅದೊಂದು ಆಕ್ಷೇಪಾರ್ಹ ಚಿತ್ರವಲ್ಲ. ಟಾಯ್ಲೆಟ್ ನ ಕಮೋಡ್ ಆ ಚಿತ್ರದಲ್ಲಿ ಕಾಣುವುದರಿಂದ ವಿದ್ಯಾರ್ಥಿನಿ ಟಾಯ್ಲೆಟ್ ನ ಒಳಗಿದ್ದಾಳೆ ಎಂದು ಚಿತ್ರ ಸೂಚಿಸುವುದಷ್ಟೇ ಮುಜುಗರಕ್ಕೆ ಒಳಗಾಗುವ ವಿಷಯ. ಅದನ್ನೊಂದು ಹೊರತುಪಡಿಸಿ ಅದು ಯಾವ ರೀತಿಯಲ್ಲೂ ವಿದ್ಯಾರ್ಥಿನಿಯ ಘನತೆಗೆ ಧಕ್ಕೆ ತರುವಂತಹ ಫೋಟೋ ಅದಾಗಿರಲಿಲ್ಲ.
ಫೋಟೋ ತೆಗೆದ ವಿದ್ಯಾರ್ಥಿನಿಯರು ತನ್ನ ಜೀವದ ಗೆಳೆತಿಯರಾದ ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಹೋಗಿ ಸಾರಿ ಕೇಳುವವರೆಗೂ ಆ ವಿದ್ಯಾರ್ಥಿನಿಗೆ ತನ್ನೊದೊಂದು ಫೋಟೋ ಇತ್ತು ಎಂಬುದೇ ಗೊತ್ತಿರಲಿಲ್ಲ. ಆ ವಿದ್ಯಾರ್ಥಿನಿ ಆ ನಂತರ ಆಳಲು ಶುರು ಮಾಡಿದೆ. ಆ ಬಳಿಕ ವಿಷಯ ಪ್ರಾಂಶುಪಾಲರ ಗಮನಕ್ಕೆ ಗಮನಕ್ಕೆ ಬಂದಿದೆ. ಪ್ರಾಂಶುಪಾಲರು ಎಲ್ಲರನ್ನೂ ಕರೆದು ವಿಚಾರಿಸಿ ಮೊಬೈಲ್ ಗಳನ್ನು ಪರಿಶೀಲಿಸಿದ್ದಾರೆ. ಫೋಟೋದಲ್ಲಿ ಆಕ್ಷೇಪಾರ್ಹ ವಿಷಯ ಇಲ್ಲದೇ ಇರುವುದು, ಫೋಟೋ ತೆಗೆದ ಕೆಲವೇ ಕ್ಷಣಗಳಲ್ಲಿ ಫೋಟೋ ಡಿಲೀಟ್ ಆಗಿರುವುದು, ಯಾರಿಗೂ ಫೋಟೋ ಕಳುಹಿಸಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿದ್ದಾರೆ. ವಿಷಯ ಅಲ್ಲಿಗೆ ಮುಗಿದಿತ್ತು.
ಮರುದಿನ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳ ಕಿವಿಗೆ ಈ ವಿಷಯ ಬಿದ್ದಿದೆ. ತರಗತಿ ಬಹಿಷ್ಕರಿಸುವಂತೆ ವಿದ್ಯಾರ್ಥಿಗಳಿಗೆ ಎಬಿವಿಪಿ ಕೇಳಿಕೊಂಡಿತು. ಆದರೆ ವಿದ್ಯಾರ್ಥಿಗಳು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. “ತರಗತಿಯ ವಿದ್ಯಾರ್ಥಿಗಳ ಮಧ್ಯೆ ನಡೆಯುವ ಸಾಮಾನ್ಯ ತುಂಟಾಟ ಗುರಿ ತಪ್ಪಿ ಅವಾಂತರ ಆಗಿದೆಯಷ್ಟೆ. ವಿದ್ಯಾರ್ಥಿನಿಯರು ಪರಸ್ಪರ ಕ್ಷಮೆಯೂ ಕೇಳಿದ್ದಾರೆ. ಹಾಗಿರುವಾಗ ವಿಷಯ ಬೆಳೆಸುವುದು ಯಾಕೆ ?” ಎಂದು ಎಬಿವಿಪಿಯನ್ನು ಬಹುತೇಕ ವಿದ್ಯಾರ್ಥಿಗಳು ಪ್ರಶ್ನಿಸಿದರು. ಆದರೆ ಎಬಿವಿಪಿ ವಿದ್ಯಾರ್ಥಿಗಳು ಬಲವಂತವಾಗಿ ಕಾಲೇಜು ಬಂದ್ ಮಾಡಿದರು.
ಇದರಿಂದ ಪೇಚಿಗೆ ಸಿಲುಕಿದ ಕಾಲೇಜು ಆಡಳಿತ ಮಂಡಳಿ ಹಿಂದೂ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿತು.
“ನಮ್ಮ ಹುಡುಗಿ ತನ್ನ ಗೆಳತಿಯ ಫೋಟೋ ತೆಗೆಯಲು ಹೋಗಿ ತಪ್ಪಿ ಇನ್ನೊಬ್ಬಳು ಸಹಪಾಠಿಯ ಫೋಟೋ ತೆಗೆದಿದ್ದಾಳೆ. ಅದಕ್ಕೆ ಕ್ಷಮೆಯೂ ಕೇಳಿದ್ದಾಳೆ. ಆದರೂ ತಪ್ಪಾಗಿದ್ದರೆ ನಾವೂ ಕ್ಷಮೆ ಕೇಳುತ್ತೇವೆ. ಬೇಕಿದ್ದರೆ ಟಿಸಿ ಕೊಟ್ಟು ಕಳುಹಿಸಿ. ಯಾವುದೇ ಗದ್ದಲ ಆಗುವುದು ಬೇಡ” ಎಂದು ಮುಸ್ಲಿಂ ವಿದ್ಯಾರ್ಥಿನಿಯರ ತಂದೆ ತಾಯಿ ಕಾಲೇಜು ಆಡಳಿತ ಮಂಡಳಿ ಎದುರು ಮನವಿ ಮಾಡಿದ್ದಾರೆ.
“ಇದೊಂದು ಮಕ್ಕಳಾಟವಷ್ಟೆ. ಮಕ್ಕಳು ಪರಸ್ಪರ ಸಾರಿ ಕೇಳಿದ್ದಾರೆ. ಪೋಟೋ ತೆಗೆದಾಕೆ ಮತ್ತು ಗೆಳತಿ ಬಿಟ್ಟರೆ ಇನ್ನೊಬ್ಬರು ಆ ಫೋಟೋ ನೋಡಿಲ್ಲ. ಹಾಗಾಗಿ ಯಾರ ಭವಿಷ್ಯವೂ ಹಾಳಾಗುವುದು ಬೇಡ. ಯಾರಿಗೂ ಟಿಸಿ ಕೊಡೋದು ಬೇಡ. ಯಾರೂ ಕೂಡಾ ಮುಂದೆ ಮೊಬೈಲ್ ನಲ್ಲಿ ತುಂಟಾಟ ಆಡಬಾರದು ಎಂದು ಎಲ್ಲರಿಂದ ಬರೆಸಿಕೊಂಡರೆ ಸಾಕು” ಎಂದು ಹಿಂದೂ ವಿದ್ಯಾರ್ಥಿನಿಯರ ಪೋಷಕರು ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದರು ಎಂದು ವಿದ್ಯಾರ್ಥಿನಿಯ ತಂದೆಯೊಬ್ಬರು (ಹೆಸರು ಬಹಿರಂಗಪಡಿಸಲಾಗುವುದಿಲ್ಲ) ತಿಳಿಸಿದ್ದಾರೆ.
ಕೇವಲ ಇಬ್ಬರು ನೋಡಿದ್ದ ಫೋಟೋವನ್ನು ಲಕ್ಷಾಂತರ ಜನ ಇಮ್ಯಾಜಿನೇಷನ್ ಮಾಡುವಂತೆ ಮಾಡುವಂತೆ ಮಾಡಿ ಹಿಂದೂ ವಿದ್ಯಾರ್ಥಿನಿಯನ್ನು ಮುಜುಗರಕ್ಕೆ ಸಿಲುಕಿಸಿದ ಸಾಧನೆ ಎಬಿವಿಪಿ ಮತ್ತು ಹಿಂದುತ್ವ ಸಂಘಟನೆಗಳದ್ದು ! ಯೂನಿಫಾರಂನಲ್ಲಿದ್ದ ಫೋಟೋವನ್ನು ಬೆತ್ತಲೆ ಫೋಟೋ, ಅಶ್ಲೀಲ ಫೋಟೋ ಎಂಬ ಅಪಪ್ರಚಾರ ಮಾಡಿದ್ದು ಬಿಜೆಪಿ ಶಾಸಕರ ಸಾಧನೆ.
ನೇತ್ರಾ ಕಾಲೇಜಿನ ಗೆಳತಿಯರ ತಂಡದಿಂದ ಹಿಂದುತ್ವ ಸಂಘಟನೆಗಳು ಮತ್ತು ಬೆತ್ತಲೆ ಶಾಸಕರು ಕಲಿಯೋದು ಸಾಕಷ್ಟಿದೆ. ಮುಸ್ಲಿಂ ವಿದ್ಯಾರ್ಥಿಯೊಬ್ಬಳು ತುಂಟಾಟ ಮಾಡಿ ಎಡವಟ್ಟಾದಾಗ ಸುಮ್ಮನಿದ್ದಿದ್ದರೆ ವಿಷಯವೇ ಮುಚ್ಚಿ ಹೋಗುತ್ತಿತ್ತು. ತನ್ನ ಹಿಂದೂ ಗೆಳತಿಯ ಬಳಿ ತನ್ನ ತಪ್ಪಿನ ಬಗ್ಗೆ ಪಶ್ಚಾತಾಪಪಟ್ಟುಕೊಂಡಾಗ ಆ ಹಿಂದೂ ಗೆಳತಿಯರು ತನ್ನ ಮುಸ್ಲಿಂ ಗೆಳತಿಯ ಪರವಾಗಿ ಸಹಪಾಠಿಯಲ್ಲಿ ಕ್ಷಮೆ ಕೇಳುವುದು ಕರಾವಳಿಗೊಂದು ಪಾಠದಂತಿದೆ.