ಬೆಳ್ತಂಗಡಿ: ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಉಳಿದ ಕಡೆಗಳಲ್ಲಿ ಮಾಧ್ಯಮದ ಮೂಲಕ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವಿರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ, ಅವಹೇಳನಕಾರಿ ಹೇಳಿಕೆ ಖಂಡಿಸಿ ಅಖಿಲ ಕರ್ನಾಟಕ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತವೃಂದದಿಂದ ಉಜಿರೆಯಲ್ಲಿ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಇಂದು ನಡೆಯಿತು.

ಸಮಾವೇಶವು ಜನಾರ್ದನ ಸ್ವಾಮಿ ದೇವಸ್ಥಾನದಿಂದ ಎಸ್‌ಡಿಎಂ ಕಾಲೇಜಿನವರೆಗೆ ಬೃಹತ್ ಮೆರವಣಿಗೆಯ ಮೂಲಕ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಎಲ್.ಎಚ್ ಮಂಜುನಾಥ್ ಮಾತನಾಡಿ, ಸುಳ್ಳಿನ ಗೋಪುರದ ಮೇಲೆ ನಿಂತರೆ ಸತ್ಯ ಕಾಣೋದಿಲ್ಲ.ಸೌಜನ್ಯ ಕುಟುಂಬಿಕರಲ್ಲಿ ನಾನು ಮನವಿ ಮಾಡುವುದು ಇಷ್ಟೇ, ಸುಳ್ಳಿನಿಂದ ಹೊರಬಂದು ನೋಡಿ ಆವಾಗ ನಿಮಗೆ ಸತ್ಯ ಕಾಣುತ್ತದೆ.ಸತ್ಯವನ್ನು ಕಾಣುವ ಪ್ರಯತ್ನ ಮಾಡಿ.
2012ರಿಂದ ಕೆಲವರು ಧರ್ಮಸ್ಥಳದ ವಿರುದ್ಧ ಭಾರೀ ಪ್ರತಿಭಟನೆ ನಡೆಸಿಕೊಂಡು ಬಂದಿದ್ದಾರೆ.ಈಗ ಸಮಾಜ ಸೇವೆಯಲ್ಲಿರುವ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅವಮಾನ ಮಾಡುವ ಕಾರ್ಯ ನಡೆದಿದೆ ಎಂದರು.ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಭಾರತ ದೇಶದಲ್ಲಿ ಯಾವಾಗಲೂ ಸತ್ಯಕ್ಕೆ ಜಯವಿದೆ.ಧರ್ಮಸ್ಥಳ ಪವಿತ್ರ ಆಗಿದೆ. ಖಾವಂದರು ಪರಿಶುದ್ಧವಾಗಿದ್ದಾರೆ ಎಂದರು.


ಮಾಜಿ ಮಂತ್ರಿ ಅಭಯಚಂದ್ರ ಜೈನ್ ಮಾತನಾಡಿ, ಯಾರು ಕೊಂದವರ ಜೊತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೋ ಅವರೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.ಪ್ರತಿಭಟನೆ ಸಭೆ ಬಳಿಕ ಉಜಿರೆ ದೇವಸ್ಥಾನದಿಂದ ಉಜಿರೆ ಎಸ್‌ಡಿಎಂ ಕಾಲೇಜಿನವರೆಗೆ ಪ್ರತಿಭಟನಾ ಜಾಥಾ ನಡೆಯಿತು.ಸೌಜನ್ಯ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ ನ್ಯಾಯಕ್ಕಾಗಿ ಒತ್ತಾಯ ಮಾಡ ಬೇಕೆಂದು ಶಾಸಕ ಹರೀಶ್ ಪೂಂಜಾ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾವೇಶ ನಡೆಯುತ್ತಿದ್ದಾಗ ಅಲ್ಲಿಗೆ ಸೌಜನ್ಯ ತಾಯಿ ಕುಸುಮಾವತಿ ಕೂಡಾ ಆಗಮಿಸಿದ್ದು ಅವರು ವೇದಿಕೆ ಏರಲು ಪ್ರಯತ್ನಿಸಿದ್ದು, ಅವರನ್ನು ವೇದಿಕೆ ಹತ್ತಲು ಪೊಲೀಸರು ಬಿಡದೇ ಇದ್ದಾಗ ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.ಬಳಿಕ ಜಸ್ಟೀಸ್ ಫಾರ್ ಸೌಜನ್ಯ ಎಂಬ ಭಿತ್ತಿಪತ್ರ ಹಿಡಿದ ಕುಸುಮಾವತಿ ಅವರನ್ನು ಪೊಲೀಸರು ಕಳುಹಿಸಿಕೊಟ್ಟರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಅಜಿಲ ಸೀಮೆಯ ಅರಸ ಡಾ. ಪದ್ಮಪ್ರಸಾದ್ ಅಜಿಲ, ಮಾಜಿ ಮಂತ್ರಿ ವಿನಯಕುಮಾರ್ ಸೊರಕೆ ಮುಂತಾದ ರಾಜಕೀಯ ಸಂಘಟನಾ ನಾಯಕರು ಉಪಸ್ಥಿತರಿದ್ದರು.