ಅಬುಧಾಬಿ,ಯು.ಎ.ಇ ,ಸೆಪ್ಟೆಂಬರ್ 01 : SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 01/09/2023 ನೇ ಶುಕ್ರವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್ ನ ಖಾಲಿದಿಯ್ಯಾ ಬ್ಲಡ್ ಬ್ಯಾಂಕ್ ಅಬುಧಾಬಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಯಶಸ್ವೀ ರಕ್ತ ದಾನ ಶಿಬಿರದಲ್ಲಿ ಒಟ್ಟು 67 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಖಾಲಿದಿಯ್ಯಾ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಸ್ತಾದ್ ಶಹೀರ್ ಹುದವಿಯವರು “ಇಸ್ಲಾಂ ಎಂಬುದು ಕೇವಲ ನಮಾಝ್ ,ಕುರ್ ಆನ್ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ ಗೊಳಿಸದೆ ಜನಪರ ಸೇವೆಗಳಿಗೂ ಕೈಜೋಡಿಸಿದರೆ ಮಾತ್ರ ಇಸ್ಲಾಂ ಎಂಬುದಕ್ಕೆ ಸರಿಯಾದ ಅರ್ಥ ಕಲ್ಪಿಸಿದಂತಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ವೆಲ್ಫೇರ್ ಆಶೋಸಿಯೇಸನ್ ಅಬುಧಾಬಿ ಇದರ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಅಲಿಯವರು ಸಂಸ್ಥೆಯು ಹಮ್ಮಿಕೊಂಡತಹ ಸಮಾಜ ಸೇವೆಯನ್ನು ಪ್ರಶಂಸಿಸಿದರು ಮತ್ತು ಎಸ್ ಕೆ ಎಸ್ ಎಸ್ ಎಫ್ ನಂತಹ ಸಂಘಟನೆಯು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಜನಪರ ಕಾರ್ಯಕ್ರಮಗಳಲ್ಲೂ ತೊಡಗಿಸಬೇಕೆಂದು ಕರೆ ನೀಡಿದರು.
ಅಬುಧಾಬಿ ಸುನ್ನಿ ಸೆಂಟರ್ ಇದರ ಅಧ್ಯಕ್ಷರಾದ ಅಸ್ಸಯ್ಯದ್ ಅಬ್ದಲ್ ರಹ್ಮಾನ್ ತಂಙಳ್ ರವರು ಪ್ರಾಸ್ತವಿಕ ಮಾತುಗಳನ್ನಾಡಿ ರಕ್ತದಾನ ಶಿಬಿರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಯು ಎ ಇ ಇದರ ಅಧ್ಯಕ್ಷರಾದ ಅಬ್ದುಲ್ಲಾ ಮಾದುಮೂಲೆರವರು ಮಾತನಾಡಿ ಸಂಸ್ಥೆಯು ಹಮ್ಮಿಕೊಂಡಂತಹ ರಕ್ತದಾನ ಶಿಬಿರದ ಬಗ್ಗೆ ಹರ್ಷ ವ್ಯಕ್ತಪಡಿಸಿ ರಕ್ತದಾನಕ್ಕಿಂತ ಉತ್ತಮವಾದ ದಾನ ಮತ್ತೊಂದಿಲ್ಲ ಎಂದು ಹೇಳುತ್ತಾ ಪ್ರತೀ ಎರಡು ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡುತ್ತಾ ಇತರರಿಗೂ ರಕ್ತದಾನದ ಮಹತ್ವದ ಬಗ್ಗೆ ತಿಳುವಳಿಕೆ ನೀಡಬೇಕೆಂದು ತಿಳಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವ್ಯವಸ್ಥಾಪಕರಾದ ಸಿರಾಜುದ್ದೀನ್ ಪರ್ಲಡ್ಕ ರವರು ರಕ್ತದಾನದ ಮಹತ್ವದ ಬಗ್ಗೆ ಹಾಗೂ ರಕ್ತದಾನ ಶಿಬಿರದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.
ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಗೌರವಾಧ್ಯಕ್ಷರಾದ ಹನೀಫ್ ಅರಿಯಮೂಲೆ ಮಾತನಾಡಿ ಸಂಸ್ಥೆಯು ಈವರೆಗೆ ನಡೆದುಬಂದ ಹಾದಿ ಹಾಗೂ ಅದರ ಕಾರ್ಯವೈಕರಿಗಳ ಬಗ್ಗೆ ವಿವರಣೆ ನೀಡಿದರು .
ಶಿಬಿರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರಾದ ಶಾಫಿ ಮಾಣಿ, ಸಫ್ವಾನ್ ಕೂರತ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಬುಧಾಬಿ ಕರ್ನಾಟಕದ ಪ್ರಮುಖರಾದ ಶಾಫಿ ಪೆರುವಾಯಿ, ಅಬೂಬಕ್ಕರ್ ಸಕಲೇಶ್ ಪುರ ಮತ್ತು ಬಶೀರ್ ಚೇರಂಭಾಣೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




ಕಾರ್ಯಕ್ರಮವನ್ನು ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿದರು ಮತ್ತು SKSSF ಅಬುಧಾಬಿ ಕರ್ನಾಟಕ ಸಮಿತಿಯ ಉಪಾಧ್ಯಕ್ಷರಾದ ಹಾಫಿಳ್ ಝೈನ್ ಸಖಾಫಿ ಕಾರ್ಯಕ್ರಮವನ್ನು ನಿರೂಪಿಸಿದರು.