ಚಿಕ್ಕಮಗಳೂರು: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕಂಚೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮೃತಪಟ್ಟ ಕಾರ್ಮಿಕನನ್ನು ತಮಿಳುನಾಡು ಮೂಲದ ಶ್ರೀಧರ್ (65) ಎಂದು ಗುರುತಿಸಲಾಗಿದೆ. ರಮೇಶ್ ಎಂಬವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗ ಕಾರ್ಮಿಕರತ್ತ ನುಗ್ಗಿದೆ. ಈ ವೇಳೆ ಕಾರ್ಮಿಕರು ಜೀವ ಭಯದಿಂದ ಓಡಿದ್ದಾರೆ. ಆದರೆ ಶ್ರೀಧರ್ ಅವರು ಆನೆ ಬರುತ್ತಿದ್ದ ದಾರಿಯಲ್ಲೇ ಓಡಿದ್ದರಿಂದ ಕಾಡಾನೆ ತುಳಿದು ಸಾಯಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತ ಶ್ರೀಧರ್ ಅವರು ತೋಟದ ಮನೆಯಲ್ಲೇ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದು, ಅವರ ಕುಟುಂಬದವರು ತಾಲೂಕು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮೃತ ಶ್ರೀಧರ್ ಅವರಿಗೆ ಇಬ್ಬರು ಪುತ್ರರು ಮತ್ತು ಐವರು ಪುತ್ರಿಯರಿದ್ದಾರೆ.
ಕಾಡಾನೆ ಇನ್ನೂ ಕಂಚೇನಹಳ್ಳಿ ಗ್ರಾಮದ ಸುತ್ತಮುತ್ತ ಸಂಚಾರ ಮಾಡುತ್ತಿದ್ದು, ಗ್ರಾಮಸ್ಥರು ಪ್ರಾಣಭೀತಿಯಲ್ಲಿದ್ದಾರೆ. ಕಾಡಾನೆ ಸ್ಥಳಾಂತರಕ್ಕೆ ಗ್ರಾಮಸ್ಥರು, ರೈತರು ಆಗ್ರಹಿಸಿದ್ದು, ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.