ಮುಂಬೈ ಸೆ.2 : ಹಿಂದಿ ಕಿರುತೆರೆಯ ಜನಪ್ರಿಯ ನಟ ಸಿದ್ಧಾರ್ಥ್ ಶುಕ್ಲಾ ಅವರು ಇಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ಬಿಗ್ ಬಾಸ್ ಹಿಂದಿ 13ನೇ ಸೀಸನ್ ವಿನ್ನರ್ ಆಗಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ‘ಬಾಲಿಕಾ ವಧು’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅವರು ಜನಪ್ರಿಯತೆ ಗಳಿಸಿದ್ದರು. ಬುಧವಾರ ರಾತ್ರಿ ಮಲಗುವಾಗು ಅವರು ಯಾವುದೋ ಔಷಧಿ ಸೇವಿಸಿದ್ದರು. ಆದರೆ ಗುರುವಾರ ಬೆಳಗ್ಗೆಯೊಳಗೆ ಅವರು ನಿಧನರಾಗಿದ್ದಾರೆ ಎಂದು ಮುಂಬೈನ ಕೂಪರ್ ಆಸ್ಪತ್ರೆ ಮೂಲಗಳು ತಿಳಿಸಿವೆ. ಸಿದ್ಧಾರ್ಥ್ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರು ಕಂಬನಿ ಮಿಡಿಯುತ್ತಿದ್ದಾರೆ.
ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದ ಅವರು ನಂತರ ಕಿರುತೆರೆಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಹಲವು ಧಾರಾವಾಹಿಗಳಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಬಿಗ್ ಬಾಸ್ ಸೀಸನ್ 13ರಲ್ಲಿ ಅವರು ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್ ಬಾಸ್ ಮಾತ್ರವಲ್ಲದೆ, ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದರು. ಬಿಗ್ ಬಾಸ್ 14ರಲ್ಲಿ ಅವರು ಗೆಸ್ಟ್ ಆಗಿ ದೊಡ್ಮನೆ ಪ್ರವೇಶಿಸಿದ್ದರು.
ಬಿಗ್ ಬಾಸ್ ಸೀಸನ್ 13ರಲ್ಲಿ ಸಿದ್ಧಾರ್ಥ್ ಜೊತೆ ಸ್ಪರ್ಧಿಸಿದ್ದ ಅನೇಕರು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಸಿದ್ಧಾರ್ಥ್ ಸಾವಿನ ಬಗ್ಗೆ ಕೆಲವು ಅನುಮಾನಗಳು ಕೂಡ ವ್ಯಕ್ತವಾಗುತ್ತಿವೆ. ಹಾಗಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನು ಬರಬಹುದು ಎಂಬ ಕುತೂಹಲ ಮೂಡಿದೆ.
ಇವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.