ಹಣ, ಬೆಲೆಬಾಳುವ ವಸ್ತುಗಳನ್ನು ಕದ್ದು ಅರೆಸ್ಟ್ ಆಗೋದು ತೀರ ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಹಿಳೆಯರ ಒಳಉಡುಪುಗಳನ್ನು ಕದ್ದು ಬಂಧಿತನಾಗಿದ್ದಾನೆ. ಅವನು ಕದ್ದಿದ್ದು ಒಂದೆರಡು ಒಳಉಡುಪಲ್ಲ. 700ಕ್ಕೂ ಹೆಚ್ಚು ಒಳಉಡುಪುಗಳು. ಇದು ನಡೆದದ್ದು ಜಪಾನ್’ನಲ್ಲಿ. 56ವರ್ಷದ ಟೆಟ್ಸುವೋ ಉರಾಟಾ ಬಂಧಿತ ವ್ಯಕ್ತಿ. ದಕ್ಷಿಣ ಜಪಾನ್ನ ಬೆಪ್ಪು ನಗರದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಉರಾಟಾ, ತನ್ನ ಮನೆಯಲ್ಲಿ ಹೀಗೆ ಒಳಉಡುಪುಗಳನ್ನು ದೊಡ್ಡಮಟ್ಟದಲ್ಲಿ ಸಂಗ್ರಹ ಮಾಡಿದ್ದ ಎಂದು ಅಲ್ಲಿನ ಅಬೆಮಾ ಟಿವಿ ವರದಿ ಮಾಡಿದೆ.
ಹೀಗೆ ಒಳಉಡುಪುಗಳ ಕಳ್ಳನ ಬಗ್ಗೆ ಮೊದಲು ಪೊಲೀಸರಿಗೆ ತಿಳಿಸಿದ್ದು 21ವರ್ಷದ ಕಾಲೇಜು ವಿದ್ಯಾರ್ಥಿನಿ. ತಾನು ಆಗಸ್ಟ್ 24ರಂದು ಸಾರ್ವಜನಿಕ ಬಟ್ಟೆತೊಳೆಯುವ ಯಂತ್ರದ ಮೂಲಕ ನನ್ನ ಬಟ್ಟೆ ಒಗೆದಿದ್ದೆ. ಅಂದು ನನ್ನ ಆರು ಜತೆ ಒಳಉಡುಪುಗಳು ಕಳವಾಗಿವೆ ಎಂದು ಆಕೆ ದೂರು ನೀಡಿದ್ದಳು. ಅದಾದ ಮೇಲೆ ಮತ್ತೆ ಮೂರ್ನಾಲ್ಕು ಮಹಿಳೆಯರು ಇದೇ ತರಹದ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಬೆಪ್ಪು ನಗರ ಪೊಲೀಸರು ಉರಾಟಾ ಅವರ ಅಪಾರ್ಟ್ಮೆಂಟ್ಗೆ ತೆರಳಿ ಅಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 730 ಒಳುಡುಪುಗಳು ಪತ್ತೆಯಾಗಿವೆ.
ತಾನು ಬಂಧಿತನಾಗುತ್ತಿದ್ದಂತೆ ಉರಾಟಾ ಒಳುಡುಪುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಈತ ಕದ್ದಿದ್ದ ಒಳಉಡುಪುಗಳ ಸಂಖ್ಯೆ ನೋಡಿ ಪೊಲೀಸರಂತೂ ಕಂಗಾಲಾಗಿದ್ದಾರೆ. ಜಪಾನ್ನಲ್ಲಿ ಒಳಉಡುಪು ಕದ್ದಿರುವವರನ್ನು ಬಂಧಿಸುತ್ತಿರುವುದು ಇದೇ ಮೊದಲಲ್ಲ, ಆದರೆ ಇಷ್ಟೆಲ್ಲ ಪ್ರಮಾಣದ ಒಳಉಡುಪುಗಳನ್ನು ನಾವು ಇದುವರೆಗೆ ಜಪ್ತಿ ಮಾಡಿರಲಿಲ್ಲ ಎಂದಿದ್ದಾರೆ. ಈತ ಕದ್ದಿದ್ದ ಒಳಉಡುಪುಗಳ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ