ಕೇರಳ: ಮಾನವನು ದೈಹಿಕವಾಗಿ ನಿರಂತರ ಬೆಳವಣಿಗೆ ಹೊಂದುತ್ತಲೇ ಇರುತ್ತಾನೆ. ಆದರೆ, ಈ ಎಲ್ಲಾ ಬೆಳವಣಿಗೆಗಳ ಜೊತೆಗೆ ತಾನು ಬೆಳೆದು ಬಂದ ಬಾಲ್ಯ, ಅಂದಿನ ಸುಂದರ ಪರಿಸರ ನಿರಂತರ ತನ್ನನ್ನು ಕಾಡುತ್ತಲೇ ಇರುತ್ತದೆ. ಕಾರಣ, ಕಾಲದ ಓಗದಲ್ಲಿ ತಾನು ಕಳೆದುಕೊಂಡ ಆಮೂಲ್ಯ ನೆನಪುಗಳವು. ಆದ್ದರಿಂದಲೇ, ಎರಡು ಜೀವಗಳು ಪರಸ್ಪರ ಮಾನವೀಯತೆಯ ಹೆಸರಿನಲ್ಲಿ ಜೊತೆಯಾದ ಕಥೆಗಳನ್ನು ಮಾಧ್ಯಮಗಳು ಬಿತ್ತರಿಸುವಾಗ ನಮಗರಿವಿಲ್ಲದೆಯೇ ನಾವು ಕಣ್ಣೀರಾಗುವುದು.
ಇಂದು ಶಿರೂರು ಭೂ ಕುಸಿತದಲ್ಲಿ ಮೃತಪಟ್ಟ ಅರ್ಜುನ್ ಮನೆಗೆ ಭೇಟಿ ನೀಡಿದೆ. ಜೊತೆಗೆ ಮಾನವೀಯತೆ ಮೆರೆದು ಮಾದರಿಯಾದ ಮನಾಫಿನ ನಿವಾಸಕ್ಕೂ ಭೇಟಿ ನೀಡಿದೆ. ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟಾಗಿತ್ತು ಅಲ್ಲಿಗೆ ಹೊರಟಿದ್ದು.
ನಿರಂತರ ಹುಡುಕಾಟದ ಕೊನೆಗೆ ಅರ್ಜುನ್ ಮೃತ ಶರೀರ ದೊರೆತಾಗ ಲಾರಿಯ ಅವಶೇಷಗಳ ಜೊತೆಗೆ ಸಿಕ್ಕಿದ ಪುಟ್ಟ ಮಕ್ಕಳ ಆಟಿಕೆಯ ಲಾರಿಯನ್ನು ಮಾಧ್ಯಮಗಳ ಮೂಲಕ ಕಂಡವರೆಲ್ಲರ ಹೃದಯ ಕರಗಿತ್ತು. ಆ ಸುದ್ದಿ ತಿಳಿದಾಕ್ಷಣ ಮುಖತಃ ಆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಬೇಕೆಂದು ತೀರ್ಮಾನಿಸಿದೆ.
ಅರ್ಜುನ್ ಸಾವು ಆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಆದಾಗ್ಯೂ, ಆ ದುರಂತ ಕರಾವಳಿಯ ಮನಸ್ಸುಗಳನ್ನು ಕೋಮುವ್ಯಾದಿಯಿಂದ ಮುಕ್ತಗೊಳಿಸಲು ಶ್ರಮಿಸಿತು. ಜೊತೆಗೆ ನಾವು ಪರಸ್ಪರ ಒಂದುಗೂಡಿ ಬಾಳಬೇಕಾದವರು ಎಂಬ ಸಂದೇಶವನ್ನು ನೀಡಿತು.
ಆ ಎಪ್ಪತ್ತೆರಡು ದಿನಗಳ ಕಾಲ ರಾತ್ರಿ ಹಗಲೆನ್ನದೆ ಗಂಗವಳ್ಳಿಯಲ್ಲಿ ಮೃತ ಶರೀರವನ್ನು ಹೊರತೆಗೆಯಲು ಶ್ರಮಿಸಿದ ಮನಾಫ್ ಮತ್ತು ಸಂಗಡಿಗರು, ಜೊತೆ ನಿಂತ ಸರ್ವ ವ್ಯಕ್ತಿಗಳೂ ಜಾತ್ಯಾತೀತ ಭಾರತದ ಉತ್ತಮ ಉದಾಹರಣೆಗಳು. ಮೃತ ದೇಹ ಹೊರತೆಗೆದ ನಂತರ ನೀಡಿದ ಮಾಧ್ಯಮ ಸಂದರ್ಶನಗಳ ವೇಳೆ ಮನಾಫಿನ ಕಣ್ಣಾಲಿಗಳು ತೇವಗೊಂಡವು. ಪರಸ್ಪರ ರಕ್ತ ಹಂಚಿ ಹುಟ್ಟಿಲ್ಲದಿದ್ದರೂ ಆತ ತನ್ನ ಸಹೋದರ ಎಂಬ ಭಾವನೆ ಹುಟ್ಟಿದ್ದು ಈ ಮಣ್ಣಿನ ಗುಣದಿಂದ.
ಈ ಮಧ್ಯೆ ಯಾವುದೋ ಪುಸ್ತಕದಲ್ಲಿ ಓದಿದ ನೆನಪು ; “ವಿಚಾರಗಳನ್ನು ಚಿಂತನೆಗೆ ಒಡ್ಡುವವನು ವ್ಯಕ್ತಿಯೇ ಹೊರತು ಒಂದು ಸಮುದಾಯವಲ್ಲ. ಆ ವ್ಯಕ್ತಿಯ ಚಿಂತನೆ ನಂತರ ಸಮೂಹವನ್ನು ಬದಲಾಯಿಸಬೇಕು.” ಮನಾಫ್ ಸಹಿತವಿರುವ ವ್ಯಕ್ತಿಗಳ ಜಾತ್ಯತೀತ ಸುಂದರ ತತ್ವಗಳನ್ನು ಈ ಸಮಾಜ ಅಳವಡಿಸಬೇಕಿದೆ.