ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕಳ್ಳರ ಉಪಟಳ ಹೆಚ್ಚಾಗಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರೂ ಅದರ ಪ್ರಯೋಜನ ಮಾತ್ರ ಕಾಣಿಸುತ್ತಿಲ್ಲ. ಮನೆ ಮುಂದೆ ನಿಲ್ಲಿಸುವ ವಾಹನಗಳ ಮೇಲೆ ಕಣ್ಣಿಟ್ಟಿರುವ ಕಳ್ಳರ ಗುಂಪು ನಿನ್ನೆ ರಾತ್ರಿಯೊಂದರಲ್ಲೇ ಕೆ.ಎಚ್.ಪಿ ಕಾಲೋನಿಯಲ್ಲಿ 30 ಬೈಕ್ಗಳ ಬ್ಯಾಟರಿ ಕಳ್ಳತನ ಮಾಡಿದೆ. ಏರಿಯಾದಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಈ ಕೃತ್ಯ ನಡೆದಿರುವುದನ್ನು ನೋಡಿದರೆ ಬಿಬಿಎಂಪಿ ಕೂಡಾ ಬರೀ ಆರಂಭ ಶೂರತ್ವಕ್ಕೆ ಹೆಸರುವಾಸಿ ಎನ್ನುವುದು ಮತ್ತೆ ಸಾಬೀತಾದಂತೆ ಆಗಿದೆ.
ಒಂದೇ ರಾತ್ರಿಯಲ್ಲಿ ಕೆ.ಎಚ್.ಪಿ ಕಾಲೋನಿಯಲ್ಲಿ ಸುಮಾರು ಮೂವತ್ತು ಬೈಕ್ ಬ್ಯಾಟರಿಗಳನ್ನು ಕದಿಯಲಾಗಿದ್ದು, ಅದೇ ಏರಿಯಾದಲ್ಲಿ ಏಳೆಂಟು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿಪರ್ಯಾಸವೆಂದರೆ ಆ ಕ್ಯಾಮೆರಾಗಳ ಎದುರಿನಲ್ಲೇ ಇದ್ದ ಬೈಕ್ಗಳ ಬ್ಯಾಟರಿ ಕೂಡಾ ನಾಪತ್ತೆಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ ಕೈಚಳಕ ತೋರಿದ ಕಳ್ಳರು ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.
ಕಳ್ಳರ ಚೈಳಕಕ್ಕೆ ಈಗಾಗಲೇ ರೋಸಿ ಹೋದ ಏರಿಯಾ ಮಂದಿ ಬಿಬಿಎಂಪಿ ಹಾಗೂ ಪೊಲೀಸರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ಒಂದೇ ರಾತ್ರಿಯಲ್ಲಿ ಮೂವತ್ತು ಬೈಕ್ಗಳ ಬ್ಯಾಟರಿ ಕದ್ದು ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ.