ಬೆಳ್ತಂಗಡಿ : ಮಸೀದಿಯೊಂದರ ಉದ್ಘಾಟನೆಯ ಬ್ಯಾನರ್ ಮತ್ತು ಮತ್ತೊಂದು ಮಸೀದಿಯ ದಾರಿ ಸೂಚಕ ಫಲಕವನ್ನು ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ತಾಲೂಕಿನ ಬಾರ್ಯ ಗ್ರಾಮದ ಸೋಕಿಲ-ಬೇಂಗಿಲ ಕ್ರಾಸ್ ಬಳಿ ಬುಧವಾರ (ಫೆ.27) ರಾತ್ರಿ ನಡೆದಿದೆ.

ಕಿಡಿಗೇಡಿಗಳು ಸ್ಥಳೀಯ ತೆಕ್ಕಾರು ಜಮಾಅತ್ ವ್ಯಾಪ್ತಿಯ ಕನರಾಜೆಯ ನೂತನ ಮಸೀದಿ ಉದ್ಘಾಟನೆ ನಿಮಿತ್ತ ಹಾಕಿದ್ದ ಬ್ಯಾನರ್ ಹರಿದು ಹಾಕಿದ್ದು, ಬೇಂಗಿಲ ಮುಹಿಯುದ್ದೀನ್ ಜುಮಾ ಮಸೀದಿಯ ದಾರಿ ಸೂಚಕ ಫಲಕವನ್ನು ನೆಲಕ್ಕೆ ಕೆಡವಿದ್ದಾರೆ.
ಘಟನಾ ಸ್ಥಳದಲ್ಲಿ ಇತರ ದಾರಿ ಸೂಚಕ ಫಲಗಳು ಇದ್ದರೂ, ಕೇವಲ ಮಸೀದಿಗಳದ್ದು ಮಾತ್ರ ಗುರಿಯಾಗಿಸಿ ಹಾನಿ ಮಾಡಲಾಗಿದೆ. ಇದರ ಹಿಂದೆ ದುರುದ್ದೇಶವಿದ್ದಂತೆ ಕಾಣುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಬೇಂಗಿಲ ಜಮಾಅತ್ ವ್ಯಾಪ್ತಿಯಲ್ಲಿ ಸರ್ವ ಧರ್ಮೀಯರು ಬಹಳ ಸೌಹಾರ್ದತೆಯಿಂದ ಬದುಕುತ್ತಿದ್ದು, ಇತಿಹಾಸದಲ್ಲಿ ಇದುವರೆಗೆ ಯಾವುದೇ ಕೋಮು ಸೌಹಾರ್ದ ಕೆಡಿಸುವ ಘಟನೆಗಳು ಸಂಭವಿಸಿಲ್ಲ. ಇದೇ ಮೊದಲ ಬಾರಿ ದುಷ್ಕೃತ್ಯ ಎಸಗಲಾಗಿದೆ. ಈ ಮೂಲಕ ಊರಿನ ಸಾಮರಸ್ಯಕ್ಕೆ ಕೊಲ್ಲಿಯಿಡುವ ಪ್ರಯತ್ನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾವು ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಸಂಬಂಧಪಟ್ಟವರು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.