ಕಾರು-ಲಾರಿ ಮುಖಾಮುಖಿ ಡಿಕ್ಕಿ: ಅಕ್ಕನಿಗೆ ಬಾಗಿನ ಕೊಟ್ಟು ತವರಿಗೆ ಕರೆದೊಯ್ಯುತ್ತಿದ್ದ ಬಿಎಸ್ಎಫ್ ಯೋಧ ಮತ್ತು ಮಗು ಸಾವು
ಹಾಸನ: ಗೌರಿ ಹಬ್ಬಕ್ಕೆ ತವರಿನಿಂದ ಅಕ್ಕನನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಯುವಕ ಹಾಗೂ ಅಕ್ಕನ ಮಗು ಕೊನೆಯುಸಿರೆಳೆದಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿಲುವಾಗಿಲು ಬಳಿ ಅಕ್ಕ-ಭಾವ ಹಾಗೂ ಮಗುವನ್ನು ಜೊತೆಯಲ್ಲೇ ತವರಿಗೆ ಕರೆದೊಯ್ಯುವಾಗ ಈ ಭೀಕರ ಅಪಘಾತವಾಗಿದೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದಲ್ಲಿ ಶಂಕರ್(22) ಹಾಗೂ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಪುರದ ಶಂಕರ್ ಹಾಗು ಅರಕಲಗೂಡಿನ ಮಗು ಮೃತಪಟ್ಟವರು. ಗೌರಿ ಗಣೇಶ ಹಬ್ಬಕ್ಕಾಗಿ ಅಕ್ಕನಿಗೆ ಬಾಗಿನ ಕೊಟ್ಟು ಹಬ್ಬಕ್ಕೆ ಕರೆದೊಯ್ಯುತ್ತಿದ್ದ. ಬಿ.ಎಸ್.ಎಫ್ ಯೋಧನಾಗಿರುವ ಶಂಕರ್ ಹಬ್ಬಕ್ಕೆಂದು ರಜೆ ಮೇಲೆ ಊರಿಗೆ ಬಂದಿದ್ದ.
ಮಧು ಮತ್ತು ಪತ್ನಿ ಚೈತ್ರಾಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.