ಉಡುಪಿ: ಮಕ್ಕಳು, ಮಹಿಳೆಯರನ್ನು ಕೂಡಿಹಾಕಿಕೊಂಡು ಅಕ್ರಮವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮಂತಾತರ ಕೇಂದ್ರದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರಿನ ನಕ್ರೆ ಆನಂದಿ ಮೈದಾನದಲ್ಲಿರುವ ಪ್ರಗತಿ ಸೆಂಟರ್ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದು, ಇಲ್ಲಿ ಹಲವಾರು ವರ್ಷಗಳಿಂದ ಮತಾಂತರ ನಡೆಯುತ್ತಿದೆ. ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ ಎಂದು ಆರೋಪಿಸಿದ್ದಾರೆ.
ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ. ಕಳೆದ ಹತ್ತು ವರ್ಷಗಳಿಂದ ಮತಾಂತರ ಕೆಲಸದಲ್ಲಿ ನಿರತವಾಗಿರುವ ಪ್ರಗತಿ ಸೆಂಟರ್ ಸಂಪೂರ್ಣ ಅಕ್ರಮವಾಗಿದ್ದು, ಯಾವುದೇ ಅನುಮತಿ ಪಡೆಯದೇ ಇದನ್ನು ನಡೆಸಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಅಕ್ರಮ ಮತಾಂತರ ಕೇಂದ್ರಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನುಗ್ಗಿದ ಕೂಡಲೇ ಪರಿಸ್ಥಿತಿ ಬಿಗಡಾಯಿಸಿದ್ದು, ಕೇಂದ್ರದಲ್ಲಿದ್ದ ಪ್ರಾರ್ಥನಾನಿರತರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಸಂಘರ್ಷಕ್ಕೆ ಕಾರಣವಾಗಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಉಡುಪಿ ಜಿಲ್ಲೆಯ ಕುಕ್ಕುಂದೂರು ನಕ್ರೆ ಆನಂದಿ ಮೈದಾನದಲ್ಲಿರುವ ಸದರಿ ಕೇಂದ್ರದಲ್ಲಿ ಅನೇಕ ಸಮಯದಿಂದ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಬೆನಡಿಕ್ಟ್ ನೇತೃತ್ವದಲ್ಲಿ ಮತಾಂತರ ಕಾರ್ಯ ನಡೆಯುತ್ತಿದೆ. ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಪ್ರಾರ್ಥನಾಲಯ ನಡೆಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.