ಶಿವಮೊಗ್ಗ: ಯುವತಿಯೋರ್ವಳು ಪ್ರಸವದ ವೇಳೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಎರಡು ಗಂಟೆಯ ಒಳಗಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಯುವತಿಯು ಅವಿವಾಹಿತೆಯಾಗಿದ್ದು, ಕುಟುಂಬದವರಲ್ಲಿ ನೋವಿನ ಜೊತೆ ಚಿಂತೆಗೀಡನ್ನಾಗಿಸಿದೆೆ.
ಇತ್ತ ಯುವತಿಯ ಪ್ರೇಮ ಪ್ರಕರಣಗಳ ಹಿನ್ನೆಲೆಯಲ್ಲಿ ಯುವತಿ ಗರ್ಭಿಣಿಯಾಗಲು ಕಾರಣ ಯಾರು ಎಂದು ಪತ್ತೆ ಮಾಡಲು ಪೊಲೀಸರು ಡಿಎನ್ ಎ ಪರೀಕ್ಷೆಯ ಮೊರೆ ಹೋಗಿದ್ದಾರೆ.
ಶಿವಮೊಗ್ಗ ತಾಲೂಕಿನ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಬೆಂಗಳೂರಿಗೆ ತೆರಳುವ ಮೊದಲು ಆಕೆ ಆಯನೂರು ಸಮೀಪದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಬೆಂಗಳೂರಿಗೆ ತೆರಳಿದ ಬಳಿಕ ಬೆಂಗಳೂರು ಮೂಲದ ಯುವಕನನ್ನು ಆಕೆ ಪ್ರೀತಿಸಲಾರಂಭಿಸಿದ್ದಳು.
ಕೋವಿಡ್ ಲಾಕ್ ಡೌನ್ ವೇಳೆ ಬೆಂಗಳೂರು ಯುವಕನೊಂದಿಗೆ ಗ್ರಾಮಕ್ಕೆ ಬಂದಿದ್ದ ಯುವತಿ ತನ್ನ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಉಳಿದಿದ್ದಳು. ಯುವಕನ ಬಗ್ಗೆ ಮನೆಯವರು ವಿಚಾರಿಸಿದಾಗ ತಾವಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಆತ ನನ್ನೊಂದಿಗೆ ಬಂದಿದ್ದಾನೆ ಎಂದು ಹೇಳಿದ್ದಳು. ಆದರೆ ಮನೆಯವರ ವಿಚಾರಣೆ ಹೆಚ್ಚಾದಾಗ ಹದಿನೈದು ದಿನದಲ್ಲೇ ಪ್ರೇಯಸಿಯ ಮನೆಯಿಂದ ಯುವಕ ಬೆಂಗಳೂರಿಗೆ ತೆರಳಿದ್ದ.
ಅತ್ತ ಯುವಕ ಬೆಂಗಳೂರಿಗೆ ತೆರಳಿದ ಬಳಿಕ ಯುವತಿಯ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಮಗಳ ಹೊಟ್ಟೆ ಊದಿಕೊಳ್ಳಲಾರಂಭಿಸಿದಾಗ ಈ ಬಗ್ಗೆ ಪಾಲಕರು ಪ್ರಶ್ನಿಸಿದ್ದರು. ಗ್ಯಾಸ್ ಸ್ಟಿಕ್ ನಿಂದ ಹೊಟ್ಟೆ ಊದಿಕೊಂಡಿದೆ ಎಂದು ಪಾಲಕರಿಗೆ ಸುಳ್ಳು ಹೇಳಿದ್ದ ಯುವತಿ ವಿಚಾರ ಮುಚ್ಚಿಟ್ಟುಕೊಂಡಿದ್ದಳು. ಆದರೆ ಆಕೆ ಎಂಟು ತಿಂಗಳು ಗರ್ಭವತಿಯಾದಾಗ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಆಗ ಪಾಲಕರು ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದಿದೆ.
ಇದೇ ವೇಳೆಗೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವಧಿಪೂರ್ವವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿ ಪೂರ್ವವಾಗಿ ಮಗು ಜನಿಸಿದ್ದರಿಂದಾಗಿ ಮಗು ಬದುಕುಳಿದಿಲ್ಲ. ಮಗು ಮೃತಪಟ್ಟ ಎರಡು ಗಂಟೆ ಒಳಗಾಗಿ ಯುವತಿ ಕೂಡಾ ಮೃತಪಟ್ಟಿದ್ದಾಳೆ.
ಪೊಲೀಸರಿಗೆ ಸಂಕಷ್ಟ: ಯುವತಿ ಇಬ್ಬರನ್ನು ಪ್ರೀತಿಸುತ್ತಿದ್ದರಿಂದಾಗಿ ಆಕೆ ಯಾರಿಂದ ಗರ್ಭಿಣಿಯಾದಳು ಎಂಬುದು ಪೊಲೀಸರ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಇದೀಗ ಡಿಎನ್ಎ ಟೆಸ್ಟ್ ಮೂಲಕ ಮಗುವಿನ ತಂದೆ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಇಬ್ಬರು ಯುವಕರ ರಕ್ತದ ಮಾದರಿ ಸಂಗ್ರಹಿಸಿ ಮಗುವಿನ ಡಿಎನ್ಎಗೆ ಯಾರ ರಕ್ತದ ಮಾದರಿ ಹೊಂದಿಕೆಯಾಗುತ್ತದೆ ಎಂದು ತಿಳಿಯಲು ಪೊಲೀಸರು ಮುಂದಾಗಿದ್ದಾರೆ.