ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಎಣ್ಣೆಯಲ್ಲಿ ಪಕೋಡ ಕಾಯಿಸುವ ಅಣುಕು ಪ್ರದರ್ಶನ ಮಂಗಳೂರಿನಲ್ಲಿ ನಡೆಯಿತು.
ಇಂದು ದೇಶಾದ್ಯಂತ ಕಾಂಗ್ರೆಸ್ ‘ರಾಷ್ಟ್ರೀಯ ನಿರುದ್ಯೋಗ’ ದಿನಾಚರಣೆ ನಡೆಸಿತು. ಇದರ ಅಂಗವಾಗಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ನಗರದ ಕ್ಲಾಕ್ ಟವರ್ ಬಳಿ ನಡೆದ ಅಣುಕು ಪ್ರದರ್ಶನದ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಫಲತೆ ತೋರಿಸಲು ಮತ್ತು ಉದ್ಯೋಗ ಸೃಷ್ಟಿಗೆ ಒತ್ತಾಯಿಸಿತು.
ಈ ವೇಳೆ ಮೋದಿ ‘ಟೀ ಸ್ಟಾಲ್’, ನಿರ್ಮಲಾ ಸೀತರಾಮ್ ‘ಶೂ ಪಾಲೀಶ್’, ಅಮಿತ್ ಷಾ ‘ಪಕೋಡ ಸ್ಟಾಲ್’ ತೆರೆದು ಅಣುಕು ಪ್ರದರ್ಶನ ನಡೆಸಿತು.
ಬಳಿಕ ಕರಿದ ಪಕೋಡಾವನ್ನು ದಾರಿ ಹೋಕರಿಗೆ, ಬಸ್‌ನಲ್ಲಿ ರಿಕ್ಷಾದಲ್ಲಿ ಸಂಚರಿಸುವವರಿಗೆ ಹಂಚಲಾಯಿತು.
ಈ ವೇಳೆ ಮಾಜಿ ಸಚಿವ ರಮಾನಾಥ್ ರೈ, ಐವನ್ ಡಿಸೋಜ, ಮೊಯಿದ್ದೀನ್ ಬಾವ, ಲುಕ್ಮಾಲ್ ಬಂಟ್ವಾಳ, ಶಶಿಧರ ಹೆಗ್ಡೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು