dtvkannada

ಸಿದ್ಧೇಶ್ವರ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಮಂಗಳೂರು ಇದರ ಸಹಯೋಗದಲ್ಲಿ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಅಂತರ್ಜಾಲದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕವಿ ಸಾಹಿತಿ ಡಾ.ಸುರೇಶ ನೆಗಳ ಗುಳಿಯವರು, ಅವಳಿ ಹಬ್ಬಗಳಲ್ಲಿ ಗೌರೀ ಗಣೇಶೋತ್ಸವವು ಮುಕುಟಪ್ರಾಯವಾದುದು. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಜನರನ್ನು ಸಂಘಟಿಸಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಪ್ರೋತ್ಸಾಹಿಸಿದರು. ಇಂದಿಗೂ ಕೂಡಾ ಈ ಹಬ್ಬ ಸಕಲರನ್ನು ಒಂದುಗೂಡಿಸುತ್ತದೆ. ಈ ಹಬ್ಬದಾಚರಣೆಯಲ್ಲಿ ಆಡಂಬರ ಸಲ್ಲದು ಎಂದು ಉಪನ್ಯಾಸ ನೀಡುತ್ತಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರಚಲಿತ ವರ್ಷದ ವೇದಿಕೆಯ ಕಾರ್ಯಕ್ರಮಗಳನ್ನು ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಅವರು ಉದ್ಘಾಟಿಸಿ ಗೌರೀ ಗಣೇಶ ಹಬ್ಬದ ಔಚಿತ್ಯ ಮಹತ್ತ್ವಗಳ ಬಗ್ಗೆ ಮಾತಾಡಿ ಸ್ಪರಚಿತ ಚುಟುಕಗಳನ್ನು ವಾಚಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂ.ತಾ. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣ ದಾಸರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕರ್ನಾಟಕ ರಾಜ್ಯದ ಹಾಗೂ ಕಾಸರಗೋಡು ಜಿಲ್ಲೆಯ 22 ಮಂದಿ ಕವಿಗಳು ಗೌರೀ ಗಣೇಶ ಹಬ್ಬಕ್ಕೆ ಸಂಬಂಧಿಸಿ ಬರೆದ ಸ್ವರಚಿತ ಕವನಗಳನ್ನು ವಾಚಿಸಿದರು. ಕವಿಗೋಷ್ಠಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಗುಣಾಜೆ ರಾಮಚಂದ್ರ ಭಟ್, ‘ಕವಿತೆ ಕಟ್ಟಲು ಸಾಕಷ್ಟು ಸಿದ್ಧತೆ ನಡೆಸಿದಾಗ ಒಳ್ಳೆಯ ಕವನ ಹುಟ್ಟುವುದು. ಸಹೃದಯರ ಮೆಚ್ಚುಗೆಯೇ ಕವಿಗೆ ಶ್ರೇಷ್ಠ ಪ್ರಶಸ್ತಿ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕವಿ ಜಯಾನಂದ ಪೆರಾಜೆಯವರು ಗೋಷ್ಠಿಯಲ್ಲಿ ವಾಚಿಸಲಾದ ಕವನಗಳ ಬಗ್ಗೆ ಮಾತಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಅರುಂಧತಿ ರಾವ್ ಪ್ರಾರ್ಥಿಸಿದರು. ವೇದಿಕೆಯ ಮಂಗಳೂರು ಘಟಕದ ಅಧ್ಯಕ್ಷೆ ರೇಖಾ ಸುದೇಶ್ ರಾವ್ ಮಂಗಳೂರು ಇವರು ವೇದಿಕೆಯು ಹಮ್ಮಿಕೊಂಡ ವಿವಿಧ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡುತ್ತಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೇದಿಕೆಯ ರಾಜ್ಯಾಧ್ಯಕ್ಷೆ ಗಿರಿಜಾ ಮಾಲಿ ಪಾಟೀಲ ಅವರು ಈ ಗೋಷ್ಠಿಯ ಯಶಸ್ಸಿಗೆ ಕಾರಣರಾದ ಸಂಘಟಕರನ್ನು ಹಾಗೂ ಕವಿಗಳನ್ನು ಅಭಿನಂದಿಸಿ ಮಾತನಾಡಿದರು. ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾನಾ ಗೌಡ ಪಾಟೀಲರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಶ್ಮೀ ಸನಿಲ್ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು. ಹಿತೇಶ್ ಕುಮಾರ್ ಎ. ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!