ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಗ್ರಾಮದಲ್ಲಿ ವಿಕಲಚೇತನ ವ್ಯಕ್ತಿಯನ್ನು ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ವಿಕಲಾಂಗ ಚೇತನ ಉದಯ್ ಕುಮಾರ್ (56) ಎಂಬವರು ಕೊಲೆಯಾದ ದುರ್ದೈವಿ. ಆಸ್ತಿಮೇಲಿನ ಆಸೆಗಾಗಿ ಸ್ವಂತ ಚಿಕ್ಕಪ್ಪನಿಂದಲೇ ಈ ಕೊಲೆ ನಡೆದಿದೆ ಎಂಬ ಬಗ್ಗೆ ಕೊಡಗು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಹಾಗೂ ಯಶಸ್ವಿಯಾಗಿ ಪ್ರಕರಣವನ್ನು ಬೇಧಿಸಿದ್ದಾರೆ.
ಚಿಕ್ಕಪ್ಪ ಸುಂದರ, ಸುಂದರನ ಪುತ್ರ ಸಂದೀಪ ಹಾಗೂ ಸ್ನೇಹಿತ ಸುಲೈಮಾನ್ ಕೊಲೆ ಆರೋಪಿಗಳಾಗಿದ್ದಾರೆ. 50 ಕ್ಕೂ ಅಧಿಕ ಬಾರಿ ಮರ್ಮಾಂಗಕ್ಕೆ ಗುದ್ದಿ ಕೊಲೆ ಮಾಡಿರುವ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಕೊಲೆಗೂ ಮುನ್ನ ಕಂಠಪೂರ್ತಿ ಮಧ್ಯ ಕುಡಿಸಿದ್ದರು. ಮತ್ತಿನಲ್ಲಿದ್ದ ಉದಯ್ ಅವರನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಕೊಲೆ ಮಾಡಿದ್ದರು. ಕೊಲೆ ಬಳಿಕ ಆರೋಪಿಗಳು ಹೆಣವನ್ನು ಮರಳಿ ಮನೆಗೆ ತಂದಿಟ್ಟಿದ್ದರು. ಮರುದಿನ ಸಹಜ ಸಾವೆಂದು ಬಿಂಬಿಸಿ ಅಂತ್ಯ ಸಂಸ್ಕಾರದ ನಾಟಕ ಮಾಡಿದ್ದರು.
ಮರ್ಮಾಂಗದಲ್ಲಿ ರಕ್ತ ಸೋರಿಕೆ ಹಿನ್ನೆಲೆ ಗ್ರಾಮಸ್ಥರಲ್ಲಿ ಸಂಶಯ ಮೂಡಿತ್ತು. ಹೀಗಾಗಿ ಗ್ರಾಮಸ್ಥರಿಂದ ಪೊಲೀಸರಿಗೆ ದೂರು ಕೊಡಲಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಆ ಬಳಿಕ, ತನಿಖೆ ನಡೆಸಿದಾಗ ನಿಜ ವಿಚಾರ ಬಯಲಾಗಿದ್ದು ಈಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.