ಕೊಪ್ಪಳ: ದಲಿತರ ಮಗು ಪ್ರವೇಶಿಸಿ ಅಪವಿತ್ರ ಆಗಿದೆ ಎಂದು ಹೇಳಿ ದೇವಸ್ಥಾನ ಶುದ್ಧೀಕರಿಸಿದ್ದಲ್ಲದೇ ಮಗುವಿನ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣ ಹೆಸರಲ್ಲಿ 10 ಸಾವಿರ ರೂಪಾಯಿ ದಂಡ ಹಾಕಲಾಗಿದೆ.ಗ್ರಾಮದ ಸವರ್ಣಿಯರು ಸಭೆ ನಡೆಸಿ ದಂಡ ವಿಧಿಸಿದ್ದರು.
ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು. ದೇವಸ್ಥಾನ ಪ್ರವೇಶ ಮಾಡಿರೋ ದಲಿತ ಮಗುವಿನ ಕುಟುಂಬಕ್ಕೆ ದಂಡ ವಿಧಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಜೀವಂತ ಇರಿಸಿದ್ದು ತಡವಾಗಿ ಬೆಳಕಿಗೆ ಬಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಭೆ ಮಾಡಿದ್ದಾರೆ. ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಚನ್ನದಾಸರ ಸಮುದಾಯದ ಮಗು ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದೆ. ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಸ್ಥಾನ ಶುದ್ದಿಕರಿಸಿದ್ದರು. ಜೊತೆಗೆ ದೇವಸ್ಥಾನ ಶುದ್ಧೀಕರಣದ ಖರ್ಚಿಗಾಗಿ 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು.