ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಾಂತಿ ನಗರ ಬಳಿ ನಿಂತಿದ್ದ ಆಟೋಗೆ ವೇಗವಾಗಿ ಬಂದ ವ್ಯಾಗನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ನಜ್ಜುಗುಜ್ಜಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ.
ಯುವತಿ ಕಾರು ಚಲಾಯಿಸಿದ್ದು, ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ.ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಆಟೋದಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿದೆ. ಆಟೋ ಚಾಲಕ ಪ್ರಾಣಪಯದಿಂದ ಪಾರಾಗಿದ್ದಾರೆ.
ವ್ಯಾಗನರ್ ಕಾರಿನಲ್ಲಿದ್ದ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆಟೋದಲ್ಲಿ ಸಿಲುಕಿದ್ದ ಪ್ರಯಾಣಿಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಅಂಬುಲೆನ್ಸ್ ನಲ್ಲಿ ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದಿಂದ ಗುಂಪು ಸೇರಿದ ಸ್ಥಳೀಯರು ಕಾರಿನಲ್ಲಿದ್ದವರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಅತೀ ವೇಗವಾಗಿ ಕಾರನ್ನು ಚಲಾಯಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.