dtvkannada

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ ದ್ವಿತೀಯಾರ್ಧದ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಸನ್ ರೈಸರ್ಸ್ ಹೈದರಬಾದ್ ನೀಡಿದ 135 ರನ್​ಗಳ ಸಾಧಾರಣ ಸವಾಲನ್ನು ಕೇವಲ 17.5 ಓವರ್​ನಲ್ಲಿ ಬೆನ್ನತ್ತುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ಉತ್ತಮ ಆರಂಭ ಪಡೆದಿರಲಿಲ್ಲ.

ಮೊದಲ ಓವರ್​ನಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ ತಂಡಕ್ಕೆ ಆಘಾತ ನೀಡುವಲ್ಲಿ ಅನ್ರಿಕ್ ನೋಕಿಯಾ ಯಶಸ್ವಿಯಾದರು. ಮೊದಲ ಓವರ್​ನ 3ನೇ ಎಸೆತದಲ್ಲಿ ಡೇವಿಡ್ ವಾರ್ನರ್ (0) ವಿಕೆಟ್ ಪಡೆದು ಪ್ರಥಮ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಒಂದಷ್ಟು ಹೊತ್ತು ವೃದ್ದಿಮಾನ್ ಸಾಹ (18) ಮಿಂಚಿದರೂ ಪವರ್​ಪ್ಲೇನಲ್ಲೇ ರಬಾಡಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಕೇನ್ ವಿಲಿಯಮ್ಸನ್ (18), ಮನೀಷ್ ಪಾಂಡೆ (17) ಬೇಗನೆ ನಿರ್ಗಮಿಸಿದರು.

ಈ ವೇಳೆ ಸಂಪೂರ್ಣ ಹಿಡಿತ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್​ ಬೌಲರುಗಳು ಸನ್​ರೈಸರ್ಸ್​ ಹೈದರಾಬಾದ್​ ತಂಡದ ರನ್​ಗತಿಯನ್ನು ಸಂಪೂರ್ಣ ನಿಯಂತ್ರಿಸಿದರು. ಅಂತಿಮ ಹಂತದಲ್ಲಿ ಅಬ್ದುಲ್ ಸಮದ್ 21 ಎಸೆತಗಳಲ್ಲಿ 28 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇನ್ನೊಂದೆಡೆ ರಶೀದ್ ಖಾನ್ 22 ರನ್​ಗಳ ಕಾಣಿಕೆ ನೀಡುವುದರೊಂದಿಗೆ ಸನ್​ರೈಸರ್ಸ್​ ಹೈದರಾಬಾದ್ ಮೊತ್ತ 9 ವಿಕೆಟ್ ನಷ್ಟಕ್ಕೆ 134ಕ್ಕೆ ಬಂದು ನಿಂತಿತು. ಡೆಲ್ಲಿ ಪರ 4 ಓವರ್​ನಲ್ಲಿ 37 ರನ್​ ನೀಡಿ ಕಗಿಸೋ ರಬಾಡ 3 ಪ್ರಮುಖ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

135 ರನ್ಗಳ ಸಾಧಾರಣ ಸವಾಲು ಪಡೆದ ಡೆಲ್ಲಿ ಕ್ಯಾಪಿಟಲ್ಸ್ಗೆ ಶಿಖರ್ ಧವನ್ (42) ಹಾಗೂ ಪೃಥ್ವಿ ಶಾ (11) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 3ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ 17.5 ಓವರ್ನಲ್ಲಿ 139 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ಜಯ ತಂದುಕೊಟ್ಟರು. ಶ್ರೇಯಸ್ ಅಯ್ಯರ್ ಅಜೇಯ 47 ರನ್ ಬಾರಿಸಿದರೆ, ರಿಷಭ್ ಪಂತ್ 35 ರನ್ ಬಾರಿಸಿ ಅಜೇಯರಾಗುಳಿದರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!