ಶಾರ್ಜಾ: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಎಂ. ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗರ ಕಾದಾಟಕ್ಕೆ ಕ್ರಿಕೆಟ್ ಪ್ರಿಯರು ಕಾದುಕುಳಿತಿದ್ದಾರೆ.
ಆರ್ಸಿಬಿ ತಂಡ ಈವರೆಗೆ ಒಟ್ಟು 8 ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆಲುವು ಕಂಡಿದೆ. ಮೂರು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.706 ನೆಟ್ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಚೆನ್ನೈ ಕೂಡ 8 ಪಂದ್ಯಗಳನ್ನು ಆಡಿದ್ದು ಆರರಲ್ಲಿ ಗೆಲುವು ಕಂಡಿದೆ. ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಒಟ್ಟು 12 ಅಂಕ ಸಂಪಾದಿಸಿದ್ದು, ಎರಡನೇ ಸ್ಥಾನದಲ್ಲಿದೆ.
ಪ್ಲೇ ಆಫ್ ರೇಸ್ನಲ್ಲಿರುವ ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಕೊಹ್ಲಿ ಪಡೆ ಕೇವಲ 92 ರನ್ಗೆ ಆಲೌಟ್ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ. ಓಪನರ್ಗಳೇ ತಂಡಕ್ಕೆ ಉತ್ತಮ ಆರಂಭ ಒದಗಿಸದಿರುವುದು ತಲೆನೋವಾಗಿದೆ. ಹೀಗಾಗಿ ದೇವದತ್ ಪಡಿಕ್ಕಲ್ ಜೊತೆ ನಾಯಕ ವಿರಾಟ್ ಕೊಹ್ಲಿ ಬದಲು ಹೊಸ ಆರಂಭಿಕ ಕಣಕ್ಕಿಳಿಯುತ್ತಾನ ಎಂಬ ಕುತೂಹಲ ಮೂಡಿಸಿದೆ.
ಕಳೆದ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಬ್ಯಾಟಿಂಗ್ ಪ್ರದರ್ಶನ ನೀಡದ ಶ್ರೀಕರ್ ಭರತ್ ಮತ್ತು ಸಚಿನ್ ಬೇಬಿಗೆ ತಂಡದಲ್ಲಿ ಸ್ಥಾನ ಅನುಮಾನ. ರಜಿತ್ ಪಟಿದಾರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಸಾಕಷ್ಟು ನಂಬಿಕೆಯಿದ್ದು, ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ.
ಇತ್ತ ಚೆನ್ನೈ ತಂಡದಲ್ಲಿ ಅನುಭವಿ ಆಟಗಾರರ ಕಳಪೆ ಫಾರ್ಮ್ ಒಂದುಕಡೆಯಾದರೆ ಯಂಗ್ ಸ್ಟಾರ್ಸ್ಗಳು ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ರಜತ್ ಪಟಿದಾರ್ ಆಟ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ನಾಯಕ ಧೋನಿ, ಸುರೇಶ್ ರೈನಾ, ಡುಪ್ಲೆಸಿಸ್, ಅಂಬಟಿ ರಾಯುಡು ಆಡಲೇ ಬೇಕಾದ ಪಂದ್ಯವಾಗಿದ್ದರಿಂದ ಜವಾಬ್ದಾರಿ ವಹಿಸಬೇಕಿದೆ.
ಉಭಯ ತಂಡಗಳು ಐಪಿಎಲ್ನಲ್ಲಿ ಈವರೆಗೆ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ 9 ಪಂದ್ಯಗಳಲ್ಲಿ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಫಲಿತಾಂಶವಿಲ್ಲದೆ 1 ಪಂದ್ಯ ಅಂತ್ಯಕಂಡಿದೆ.