ವಿಜಯಪುರ: ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದವಳು ಸಂಬಂಧಿಯ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಪತಿ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿರುವವನ ಜೊತೆಗೆ ನಾನು ಇರುವೆ ಎಂದ ಪತ್ನಿ ಹೇಳಿಕೆಗೆ ಬೇಸರಗೊಂಡ ಪತಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ, ಹರಿಬಿಟ್ಟು ನೇಣಿಗೆ ಶರಣಾಗಿದ್ದಾರೆ.
ವೆಂಕಟೇಶ ದ್ವಾರನಹಳ್ಳಿ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವೆಂಕಟೇಶ್ನ ದಾಯಾದಿ ಸಹೋದರ ಶ್ರೀಶೈಲ್ ಎಂಬುವವನ ಜೊತೆಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು. ಅಲ್ಲದೆ ಶ್ರೀಶೈಲ್ ಜೊತೆಗೆ ವೆಂಕಟೇಶ್ ಪತ್ನಿ ವಾಸವಾಗಿದ್ದಳು. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಗೆ ವೆಂಕಟೇಶ್ ದೂರು ನೀಡಿದ್ದರು. ಆದರೆ ವೆಂಕಟೇಶ್ ಜೊತೆಗೆ ಇರೊಲ್ಲ, ಪ್ರೀಯಕರ ಶ್ರೀಶೈಲ್ ಜೊತೆಗೆ ಇರುವುದಾಗಿ ಪತ್ನಿ ಹೇಳಿದ್ದಾಳೆ. ಇದರಿಂದ ಮನನೊಂದು ವೆಂಕಟೇಶ್ ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಶ್ರೀಶೈಲ್ ಹೊಣೆ ಎಂದು ಫೇಸ್ಬುಕ್ನಲ್ಲಿ ಲೈವ್ ಮಾಡಿ ವೆಂಕಟೇಶ್ ಹೇಳಿದ್ದಾರೆ. ಈ ವಿಡಿಯೋ ಕಂಡ ವೆಂಕಟೇಶ್ ಸ್ನೇಹಿತರು ಮತ್ತು ಕುಟುಂಬಸ್ಥರು ಆತನನ್ನು ಹುಡುಕಾಡಿದ್ದಾರೆ. ನಂತರ ಜಮೀನಿನ ಮರದಲ್ಲಿ ನೇಣು ಬಿಗಿದುಕೊಂಡು ವೆಂಕಟೇಶ್ ಒದ್ದಾಡುತ್ತಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ಕೆಳಗಿಳಿಸಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ವೆಂಕಟೇಶ್ ಮೃತಪಟ್ಟಿದ್ದಾರೆ. ಸದ್ಯ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.