ಚಾಮರಾಜನಗರ: ಪತ್ನಿಯನ್ನು ಕೊಲೆಗೈದ ಪತಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2017 ರ ಫೆಬ್ರವರಿ 22ರಂದು ಗದ್ದೆ ನೋಡಲು ಹೋಗೋಣ ಬಾ ಎಂದು ಪತ್ನಿಯನ್ನು ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 45 ಸಾವಿರ ರೂ. ದಂಡವನ್ನು ನ್ಯಾಯಾಧೀಶ ಲೋಕಪ್ಪ ವಿಧಿಸಿದ್ದಾರೆ. ಈ ಸಂಬಂಧ ಮೃತಳ ತಾಯಿ ಸಾವಿತ್ರಮ್ಮ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಉಷಾ ವಾದ ಮಂಡಿಸಿದ್ದರು.
ವಿವಾಹವಾದ ಕೇವಲ 9 ದಿನಕ್ಕೆ ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿ ಕೊಂದ ಪೊಲೀಸ್ ಕಾನ್ಸ್‌ಟೇಬಲ್‌ಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಲೋಕಪ್ಪ ಜೀವಾವಧಿ ಶಿಕ್ಷೆ ವಿಧಿಸಲು ಆದೇಶಿಸಿದ್ದಾರೆ.
ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ವೆಂಕಟೇಶ್ ಶಿಕ್ಷೆಗೊಳಗಾದ ಅಪರಾಧಿ. ಈತ ವೃತ್ತಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು, ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಸಾವಿತ್ರಮ್ಮರವರ ಪುತ್ರಿ ದಿವ್ಯಾರನ್ನು 2017ರ ಫೆಬ್ರವರಿ 2ರಂದು ವಿವಾಹ ಮಾಡಿಕೊಂಡಿದ್ದ. ಮದುವೆಗೂ ಮುನ್ನ ಹುಡುಗಿಗೆ ಮಾಂಗಲ್ಯ ಸರ, ಹುಡುಗನಿಗೆ ಚಿನ್ನದ ಉಂಗುರ, 2.5 ಲಕ್ಷ ವರದಕ್ಷಿಣೆ ಕೊಡಲು ಒಪ್ಪಂದ ಮಾಡಿಕೊಂಡು ಅದರಂತೆ ವಿವಾಹಕ್ಕೂ ಮುನ್ನ ಮದುಮಗನಿಗೆ 2 ಲಕ್ಷ ಹಣ, ಚಿನ್ನದ ಉಂಗುರ ನೀಡಲಾಗಿತ್ತು.
ಮದುವೆಯಾದ ಮೂರೇ ದಿನಕ್ಕೆ ಮಾಂಗಲ್ಯ ಸರ, ಉಳಿದ ಹಣ 50 ಸಾವಿರ ರೂ. ಹಣವನ್ನು ತರುವಂತೆ ಕಿರುಕುಳ ಕೊಟ್ಟು ಫೆಬ್ರವರಿ 20ರಂದು ಹೆಂಡತಿಯನ್ನು ತವರಿಗೆ ಕಳುಹಿಸಿದ್ದ. ಆದರೆ ಫೆಬ್ರವರಿ 22ರಂದು ಗದ್ದೆ ನೋಡಲು ಹೋಗೋಣ ಬಾ ಎಂದು ಪತ್ನಿಯನ್ನು ಕರೆದೊಯ್ದು ಬಾವಿಗೆ ತಳ್ಳಿ ಕೊಲೆ ಮಾಡಿದ್ದ. ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.