dtvkannada

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ‘ಭಾರತ್ ಬಂದ್‌’ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೋಟೆಲ್‌ ಮಾಲಿಕರು, ಆಟೋ, ಓಲಾ-ಉಬರ್‌ ಚಾಲಕರು, ಮಾಲಿಕರು, ಲಾರಿ ಮಾಲಿಕರ ಸಂಘಗಳು ಸೇರಿ ಬಹುತೇಕ ಸಂಘಟನೆಗಳು ರೈತರ ಹೋರಾಟಕ್ಕೆ ನೈತಿಕ ಬೆಂಬಲವನ್ನಷ್ಟೇ ಸೂಚಿಸಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲು, ಮೆಟ್ರೋ ಒಳಗೊಂಡಂತೆ ಎಲ್ಲ ಸಮೂಹ ಸಾರಿಗೆಗಳು ಕೂಡ ಎಂದಿನಂತೆ ಸಂಚರಿಸಲಿವೆ. ಹೀಗಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಬಸ್ ಗಳು ಎಂದಿನಂತೆ ಓಡಾಡುತ್ತಿದ್ದು, ಜನರ ಓಡಾಟವು ನಿರಾತಂಕವಾಗಿದೆ.

ಕರಾವವಳಿಯಲ್ಲಿ ನೀರಸ: ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಎಂದಿನಂತಿದ್ದು, ಜನರು ಕೂಡಾ ಎಂದಿನಂತೆ ಕೆಲಸಗಳಲ್ಲಿ ತೊಡಗಿದ್ದಾರೆ. ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ತೆರೆದಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ವಾತಾವರಣ ಕಂಡು ಬಂದಿಲ್ಲ.

ಪಂಜಿನ ಮೆರವಣಿಗೆ, ಹೂ ಸುರಿದು ಪ್ರತಿಭಟನೆ
ಚಿಕ್ಕಬಳ್ಳಾಪುರ: ಕೃಷಿ ಕಾಯ್ದೆ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಬೆಳಿಗ್ಗೆಯೇ ಪಂಜಿನ ಮೆರವಣಿಗೆ ನಡೆಸಿದರು. ಶಿಡ್ಲಘಟ್ಟ ವೃತ್ತದಲ್ಲಿ ಹೂ ಸುರಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಲಾಗಿರುವ ಬಂದ್ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರಧಾನಿ ಮೋದಿಗೆ ಈರುಳ್ಳಿ ಹಾರ
ಚಿತ್ರದುರ್ಗ: ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆನೀಡಿರುವ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಿದರು.

ಕಲಬುರ್ಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು‌ ಎಂದು ಒತ್ತಾಯಿಸಿ ವಿವಿಧ ರೈತ, ಕಾರ್ಮಿಕ ಹಾಗೂ ಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಅಂಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರತಿಭಟನಾಕಾರರು ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!