ಬೆಂಗಳೂರು: ಬಾಬಾಬುಡನ್ಗಿರಿಯ ಇನಾಂ ದತ್ತಾತ್ರೇಯಪೀಠದ ಪೂಜಾ ವಿಧಿವಿಧಾನಗಳ ಬಗ್ಗೆ ಹೊಸದಾಗಿ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನವನ್ನು ನೀಡಿದೆ.
ಈ ಹಿಂದೆ ಸುಪ್ರೀಂಕೋರ್ಟ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಅವತ್ತಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಜಾವರ್ಗಳಿಂದ ಪೂಜೆ ಮುಂದುವರಿಸಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಬಾಂಧವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಇಂದು ಹಿಂದೂಗಳ ಪರವಾಗಿ ತೀರ್ಪು ಕೊಟ್ಟಿದೆ.
ಏನಿದು ವಿವಾದ?
ಚಿಕ್ಕಮಗಳೂರಿನ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮುಜಾವರ್ಗಳ ಬದಲು ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ಬಿಜೆಪಿ ಹಾಗೂ ಸಂಘಪರಿವಾರದ ಅಂಗ ಸಂಸ್ಥೆಗಳು ಒತ್ತಾಯಿಸುತ್ತಿದ್ದವು. 2014ರಲ್ಲಿ ಸುಪ್ರೀಂಕೋರ್ಟ್ ಸಹ ಹಿಂದೂ ಅರ್ಚಕರ ನೇಮಕಕ್ಕೆ ಸಮ್ಮತಿಸಿ ತೀರ್ಪು ನೀಡಿತ್ತು. ಅದರೆ 2018ರಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಜಾವರ್ಗಳನ್ನೇ ಮುಂದುವರಿಸಲು ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಸಂವರ್ಧನಾ ಸಮಿತಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯವು ಪೂಜಾ ವಿಧಿವಿಧಾನ ಕುರಿತು ಹೊಸದಾಗಿ ತೀರ್ಮಾನಿಸಲು ಸೂಚಿಸಿದೆ.
ಬಾಬಾಬುಡನ್ಗಿರಿಯ ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಭಕ್ತರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದಾರೆ. ಈ ಪವಿತ್ರ ಸ್ಥಳದಲ್ಲಿ ಹಿಂದೂಗಳನ್ನೇ ಪೂಜಾರಿಗಳನ್ನಾಗಿ ನೇಮಿಸಬೇಕು ಎಂದು ಬಿಜೆಪಿ ಹಿಂದಿನಿಂದ ಒತ್ತಾಯಿಸುತ್ತಿತ್ತು. ಪೀಠವನ್ನು ಮುಜರಾಯಿ ಇಲಾಖೆಯೇ ನಿರ್ವಹಿಸುತ್ತಿತ್ತು.
2014ರಲ್ಲಿ ಸುಪ್ರೀಂಕೋರ್ಟ್ ಸಹ ಮುಜರಾಯಿ ಆಯುಕ್ತರಿಗೆ ಪೂಜಾರಿ ನೇಮಕದ ಅಧಿಕಾರ ನೀಡಿತ್ತು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಿದ ನಂತರ ಈ ವಿಚಾರ ನಿರ್ಧರಿಸುವುದಾಗಿ ತಿಳಿಸಿತ್ತು. ಆದರೆ ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರವು ಪೂಜಾರಿಗಳ ನೇಮಕಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬಿಜೆಪಿ ಆರೋಪಿಸಿತ್ತು.