ಮಂಗಳೂರು: ಪೊಲೀಸ್ ಇನ್ಸ್ಪೆಕ್ಟರ್ ಎದುರೇ ನೈತಿಕ ಪೊಲೀಸ್ ಗಿರಿ ನಡೆದ ಘಟನೆ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ನಡೆದಿದೆ.
ಭಾನುವಾರ ಸಂಜೆ ಹಿಂದೂ ಸಂಘಟನೆ ಯುವಕರು ಹಾಗೂ ಅನ್ಯಕೋಮಿನ ಯುವಕ, ಯುವತಿಯರ ನಡುವೆ ಮಾತಿನ ಚಕಮಕಿಯಾಗಿದ್ದು 5 ಜನರನ್ನು ಬಂಧಿಸಲಾಗಿದೆ.
ಮಂಗಳೂರಿನ ಮೆಡಿಕಲ್ ಕಾಲೇಜೊಂದರ ಹಿಂದೂ-ಮುಸ್ಲಿಂ ಯುವಕ-ಯುವತಿಯರ ಒಟ್ಟು 6 ಜನ ಸ್ನೇಹಿತರು ವೀಕೆಂಡ್ ಎಂದು ಮಲ್ಪೆ ಬೀಚ್ಗೆ ಹೋಗಿ ವಾಪಸ್ ಬರುವಾಗ ಮಂಗಳೂರಿನ ಸುರತ್ಕಲ್ ಟೋಲ್‌ಗೇಟ್ ಬಳಿ ಹಿಂದೂ ಸಂಘಟನೆ ಗುಂಪೊಂದು ಅನ್ಯಕೋಮಿನ ಯುವಕ, ಯುವತಿಯರ ಕಾರನ್ನು ನಿಲ್ಲಿಸಿ ಪ್ರಶ್ನಿಸಲು ಮುಂದಾಗಿದ್ದಾರೆ. ಯುವತಿಯರಿಗೆ ಮುಸ್ಲಿಂ ಯುವಕರ ಜೊತೆ ಏಕೆ ಸುತ್ತಾಡುತ್ತಿದ್ದೀರಿ ಎಂದು ಪ್ರಶ್ನಿಸಿ ನಿಂದಿಸಿದ್ದಾರೆ.
ಸ್ಥಳದಲ್ಲೇ ಇದ್ದ ಇನ್ಸ್ಪೆಕ್ಟರ್ ಶರೀಫ್ ಎದುರಲ್ಲೇ ಹಿಂದೂ ಸಂಘಟನೆ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ವೇಳೆ ಇನ್ಸ್ಪೆಕ್ಟರ್ ಶರೀಫ್ ಕಾರಿನ ಮೇಲೆ ಯುವಕರ ಗುಂಪಿನಿಂದ ಆಗುತ್ತಿದ್ದ ದಾಳಿ ತಡೆದು ಜಗಳವನ್ನು ನಿಯಂತ್ರಿಸಿದ್ದಾರೆ. ಸದ್ಯ ಹಿಂದೂ ಸಂಘಟನೆಯ ಐವರನ್ನು ಬಂಧಿಸಲಾಗಿದೆ. ಭಾನುವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.