ಬೆಂಗಳೂರು : ವಿಕೃತಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ. 1998ರಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿಗೆ 2006ರಲ್ಲಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲು ಹೈಕೋರ್ಟ್ಗೆ ಉಮೇಶ್ ರೆಡ್ಡಿ ತಮ್ಮ ವಕೀಲ ಬಿ ಎನ್ ಜಗದೀಶ್ ಮೂಲಕ ಅರ್ಜಿ ಸಲ್ಲಿಸಿದ್ದ. ಆದರೆ, ನ್ಯಾ.ಅರವಿಂದ್ ಕುಮಾರ್ ಹಾಗೂ ನ್ಯಾ.ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದ್ದು, ಸರಣಿ ಹಂತಕನಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ.
ಫೆಬ್ರವರಿ 28, 1998 ರಂದು ಬೆಂಗಳೂರಿನ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007 ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಲ್ಲದೇ ಹಲವು ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಆರೋಪಿಯಾಗಿದ್ದ. 6 ಬಾರಿ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ. ಮೊದಲಿಗೆ ಪೊಲೀಸ್ ಕೆಲಸದಲ್ಲಿದ್ದು ಸೇವೆಯಿಂದ ವಜಾಗೊಂಡಿದ್ದ ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ ಜೈಲಿನಲ್ಲಿ ಬೆತ್ತಲಾಗಿ ತಿರುಗುತ್ತಿದ್ದ ಎಂದು ಸಹ ವರದಿಯಾಗಿತ್ತು.ಹೈಕೋರ್ಟ್ ಅರ್ಜಿಯ ವಿರುದ್ಧ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಎತ್ತಿ ಹಿಡಿದಿತ್ತು.
ಯಾರೀತ ?:
1969ರಲ್ಲಿ ಚಿತ್ರದುರ್ಗದಲ್ಲಿ ಬಿಎ ಉಮೇಶ್ ಹೆಸರಿನಲ್ಲಿ ಜನಿಸಿದ ಉಮೇಶ್ ರೆಡ್ಡಿ, ಸಿಆರ್‌ಪಿಎಫ್‌ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆಗೆ ಸೇರಿಕೊಂಡ.
ಕಮಾಂಡರ್ ಒಬ್ಬರ ಮನೆಯಲ್ಲಿ ಡ್ಯೂಟಿಯಲ್ಲಿದ್ದಾಗ ಆತನ ಮಗಳ ಮೇಲೆಯೆ ಅತ್ಯಾಚಾರಕ್ಕೆ ಯತ್ನಿಸಿ, ಸೇನೆಯಿಂದ ಹೊರಬಿದ್ದವ ಮತ್ತೆ ಚಿತ್ರದುರ್ಗಕ್ಕೆ ಬಂದಿದ್ದ. ಇದು ಈ ಜಗತ್ತಿಗೆ ಗೊತ್ತಿರುವ ಈತನ ಮೊದಲ ಪ್ರಕರಣ. ಹೀಗೆ ಬಂದವ ಮತ್ತೆ ಪೊಲೀಸ್ ದಿರಿಸು ತೊಟ್ಟ. ಜಿಲ್ಲಾ ಸಶಸ್ತ್ರಮೀಸಲು ಪಡೆ ಸೇರಿದ. ಇಲ್ಲಿನವರಿಗೆ ಈತನ ಸಿಆರ್‌ಪಿಎಫ್ ಕತೆ ಗೊತ್ತಿರಲಿಲ್ಲ. ಇಲ್ಲೂ ಅಪಘಾತ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡರೂ, ಸಣ್ಣ ಪುಟ್ಟ ಅಪರಾಧ ಎಂದು ಆತನನ್ನು ಬಿಟ್ಟು ಕಳಿಸಲಾಯಿತು.
ಮಧ್ಯ ಪ್ರದೇಶದಲ್ಲಿ ಪೊಲೀಸ್ ತರಬೇತಿ ಪಡೆದು ಬಂದ ರೆಡ್ಡಿ ಮುಂದೊಮ್ಮೆ ಸೀರಿಯಲ್ ಕಿಲ್ಲರ್ ಆಗುತ್ತಾನೆ, ಹಲವರ ಮೇಲೆ ಅತ್ಯಾಚಾರ ಎಸಗುತ್ತಾನೆ ಎಂಬುದು ಕನಸು ಮನಸಿನಲ್ಲೂ ಎಣಿಸುವ ವಿಚಾರವಾಗಿರಲಿಲ್ಲ.
ಜತೆಗೆ ಆತನಲ್ಲೊಂಬ ಹಂತಕ, ಕ್ರಿಮಿನಲ್ ಇದ್ದಾನೆ ಎಂಬುದು ಹೊರ ಜಗತ್ತಿಗೆ ಗೊತ್ತಾಗದಷ್ಟು ಆತ ಎಚ್ಚರ ವಹಿಸಿ ಕೃತ್ಯವನ್ನು ಎಸಗುತ್ತಿದ್ದ. ಸಾಮಾನ್ಯವಾಗಿ ಆತನ ಟಾರ್ಗೆಟ್ ಗೃಹಿಣಿಯರೇ ಆಗಿರುತ್ತಿದ್ದರು. ಮಧ್ಯಾಹ್ನ 11 ಗಂಟೆಯಿಂದ ಅಪರಾಹ್ನ 3 ಗಂಟೆಗಳ ನಡುವಿನ ಅವಧಿಯನ್ನು ಆತನ ತನ್ನ ಕೃತ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದ. ಕಾರಣ ಈ ಸಮಯದಲ್ಲಿ ಹೆಚ್ಚಿನ ಗಂಡಸರು ಮನೆಯಿಂದ ಹೊರಗಿರುತ್ತಿದ್ದರು.
ನೀರು ಅಥವಾ ವಿಳಾಸ ಕೇಳುವ ನೆಪದಲ್ಲಿ ಮನೆ ಪ್ರವೇಶಿಸುತ್ತಿದ್ದಾತ, ಚಾಕು ತೋರಿಸಿ ಬೆದರಿಸಿ, ಬಟ್ಟೆ ಕಳಚುವಂತೆ ಮಹಿಳೆಯರಿಗೆ ಹೇಳುತ್ತಿದ್ದ. ನಂತರ ಅವರ ಕೈ ಕಾಲು ಕಟ್ಟಿ, ಅತ್ಯಾಚಾರ ಎಸಗುತ್ತಿದ್ದ. ಸಂತ್ರಸ್ತೆಯನ್ನು ಉಸಿರುಗಟ್ಟಿಸಿ, ಪ್ರಜ್ಞೆ ಇಲ್ಲದಾಗ ಈತ ಕೃತ್ಯ ಎಸಗುತ್ತಿದ್ದ. ಅತ್ಯಾಚಾರ ಬಳಿಕ ಅವರನ್ನು ಕೊಂದು, ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ. ಈ ಮೂಲಕ ಇಡೀ ಘಟನೆಗೆ ದರೋಡೆಯ ಬಣ್ಣ ಬಳಿಯುತ್ತಿದ್ದ. ಸಂತ್ರಸ್ತೆಯ ಒಳ ಉಡುಪಿನ ಜತೆ ಪರಾರಿಯಾಗುತ್ತಿದ. ಪೊಲೀಸರು ಬಂಧಿಸಿದಾಗಲೆಲ್ಲಾ ಆತ ತನ್ನ ಉಡುಪಿನ ಒಳಗೆ ಮಹಿಳೆಯರ ಒಳ ಉಡುಪು ಧರಿಸಿರುತ್ತಿದ್ದ!
1996 ಡಿಸೆಂಬರ್ 6: ಚಿತ್ರದುರ್ಗಕ್ಕೆ ಬಂದವ ಕೆಇಬಿ ಕಾಲನಿಯಲ್ಲಿ ನಡೆದು ಹೋಗುತ್ತಿದ್ದ ಹೈಸ್ಕೂಲ್ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಆದರೆ ಆ ಬಾಲಕಿ ಕಲ್ಲಿನಿಂದ ಹೊಡೆದು ಈತನಿಂದ ತಪ್ಪಿಸಿಕೊಂಡಳು. ಇದೇ ರೀತಿ ಡಿಸೆಂಬರ್ 6, 1996ರಲ್ಲಿ ಇದೇ ಪ್ರದೇಶದಲ್ಲಿ 16ರ ಇನ್ನೋರ್ವ ಯುವತಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ. ಮುಂದಿನ ತಿಂಗಲೇ ಆತನನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಲಾಯಿತು.
1997 ಮಾರ್ಚ್: ರೆಡ್ಡಿ ಜತೆಗೆ ಇನ್ನೂ ಮೂವರು 16ರ ಹರೆಯದ ಯುವತಿಯ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದರು (ಮುಂದೆ 2004ರಲ್ಲಿ ಇದೇ ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಗಳಿಲ್ಲದೆ ಆತ ಖುಲಾಸೆಗೊಂಡ). ನ್ಯಾಯಾಂಗ ಬಂಧನದಲ್ಲಿದ್ದಾಗ 1997 ಮಾರ್ಚ್‌ನಲ್ಲಿ ಆತನನ್ನು ಚಿತ್ರದುರ್ಗ ಪೊಲೀಸರು ಬಳ್ಳಾರಿ ಜೈಲಿನ ಅಧಿಕಾರಿಗಳಿಗೆ ಹಸ್ತಾಂತರಿಸುವ ವೇಳೆ ಈತ ಪರಾರಿಯಾದ. ಹೀಗೆ ಜೈಲಿನಿಂದ ಹೊರ ಬಂದವ ಮತ್ತೊಂದಿಷ್ಟು ಕೃತ್ಯ ಎಸಗಿದ.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಯ ಹೆಂಡತಿಯನ್ನು ಕೊಲೆ ಮಾಡಿದ. ಅಹಮದಾಬಾದ್‌ನಲ್ಲಿ ಓರ್ವ ಯುವತಿ, ಬರೋಡದಲ್ಲಿ ಇಬ್ಬರು ಯುವತಿಯರು ಹಾಗೂ ಕುಣಿಗಲ್‌ನಲ್ಲಿ ವಿಧವೆಯೊಬ್ಬರು ಈತನ ಕೃತ್ಯಕ್ಕೆ ಬಲಿಯಾಗಬೇಕಾಯಿತು.
1997 ಜುಲೈ 7: ವಿಚಿತ್ರ ಖಯಾಲಿ ಇದ್ದ ಈತ ಮನೆಗಳ ಹಿಂಬದಿಯಲ್ಲಿ ಒಣಗಲು ಹಾಕಿದ್ದ ಮಹಿಳೆಯರ ಒಳು ಉಡುಪು ಕದಿಯುತ್ತಿದ್ದ. ಹೀಗೆ 1997ರ ಜುಲೈ 7 ರಂದು ಪೀಣ್ಯದಲ್ಲಿ ಕದಿಯಲು ಹೋಗಿ ಮತ್ತೆ ಪೊಲೀಸರ ಅತಿಥಿಯಾದ. ಅಂದು ತನ್ನ ಹೆಸರು ರಮೇಶ್ ಎಂದವನು 24 ಗಂಟೆಗಳಲ್ಲೇ ಪೊಲೀಸರ ಕೈಯಿಂದ ತಪ್ಪಿಸಿಕೊಂಡ. ಮೈಕೋ ಲೇಔಟ್‌ಗೆ ವಿಚಾರಣೆ ಒಂದಕ್ಕೆ ಕರೆಯುವಾಗ ಈತ ತನ್ನ ಬುದ್ದಿ ತೋರಿಸಿದ್ದ.
1998 ಫೆಬ್ರವರಿ 28: ಹೀಗೆ ಹೊರ ಬಂದವ 1998ರ ಫೆ. 28 ರಂದು ಪೀಣ್ಯದಲ್ಲಿ ವಿಧವೆ ಒಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ. ಮತ್ತೋರ್ವ ಮಹಿಳೆ ಮೇಲೆ ಪೀಣ್ಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ಕೂಗಿಕೊಂಡಾಗ ಮೊದಲ ಮಹಡಿಯಿಂದ ಹಾರಿ ಕಾಲು ಮುರಿದುಕೊಂಡು ಸಿಕ್ಕಿ ಬಿದ್ದ.
2002 ಮಾರ್ಚ್ 3-4ರ ನಡುವೆ ಈತ ಮತ್ತೊಮ್ಮೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ. ಬಳ್ಳಾರಿಯಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆತರುವಾಗ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಪೊಲೀಸರಿಗೆ ಕೋಳಿ ಊಟ, ಕುಡಿಯಲು ಎಣ್ಣೆ ತಂದುಕೊಟ್ಟು ವಿಶ್ವಾಸ ಗಳಿಸಿಕೊಂಡಿದ್ದ ರೆಡ್ಡಿ, ಹಿರಿಯೂರು ಬೈಪಾಸ್ ಬಳಿ ಡಾಬಾ ಪಕ್ಕ ಬಸ್ ನಿಲ್ಲಿಸಿದಾಗ ಮೂತ್ರ ಮಾಡಲು ಕೋಳ ತೆಗೆಯುವಂತೆ ಪೊಲೀಸರಿಗೆ ಹೇಳಿ ತಪ್ಪಿಸಿಕೊಂಡಿದ್ದ. ಬಳಿಕ ಪುನಃ 2 ತಿಂಗಳ ನಂತರ ಬಂಧಿತನಾದ.
2002 ಮೇ 17: ಧಾರವಾಡದಿಂದ ಮೇ 17, 2002ರಲ್ಲಿ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಂದಿಳಿದವನು, ಶೇವ್ ಮತ್ತು ಕೂದಲು ಕಟ್ ಮಾಡಿಸಲು ಬಂದಾಗ ಆಟೋ ರಿಕ್ಷಾ ಚಾಲಕ ಸತ್ಯವೇಲು ಕಣ್ಣಿಗೆ ಬಿದ್ದ. ಪೇಪರ್‌ನಲ್ಲಿ ಫೋಟೋ ನೋಡಿದ್ದ ಆತ ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸುವಂತೆ ಮಾಡಿದ. ಬ್ರಾ ಮತ್ತು ಮಹಿಳೆಯರ ಪ್ಯಾಂಟಿ ಧರಿಸಿದ್ದ ರೆಡ್ಡಿ ಬ್ಯಾಗಿನಲ್ಲಿ ಹತ್ತಾರು ಪ್ಯಾಂಟಿ, ಬ್ರಾ, ಚೂಡಿದಾರ್, ಸೀರೆ, ಬ್ಲೌಸ್, ನೈಟಿಗಳಿದ್ದವು.
2006, ಅಕ್ಟೋಬರ್ 26: ಸರಿಯಾದ ಸಾಕ್ಷ್ಯಗಳಿಲ್ಲದೆ 11 ಪ್ರಕರಣಗಳಲ್ಲಿ ಖುಲಾಸೆಗೊಂಡರೂ 9 ಪ್ರಕರಣಗಳಲ್ಲಿ ಆತನ ವಿರುದ್ಧದ ಆರೋಪಗಳು ಸಾಬೀತಾಗಿದ್ದವು. 2006ರ ಅಕ್ಟೋಬರ್ 26 ರಂದು ಬೆಂಗಳೂರು ಸಿಟಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ನ್ಯಾಯಾಧೀಶೆ ಕೆ ಸುಕನ್ಯಾ ಹಲವು ಶಿಕ್ಷೆಗಳನ್ನು ಆತನಿಗೆ ಶಿಕ್ಷೆ ವಿಧಿಸಿದರು. ಇದರಲ್ಲಿ ಗಲ್ಲು ಶಿಕ್ಷೆಯೂ ಇತ್ತು. ನಾನು ಓದಬೇಕು, ತಾಯಿಯನ್ನು ನೋಡಿಕೊಳ್ಳಬೇಕು ಎಂದು ವಿನಾಯಿತಿಗೆ ಕೇಳಿಕೊಂಡರೂ ನ್ಯಾಯಾಧೀಶರು ಒಪ್ಪದೆ ಶಿಕ್ಷೆ ನೀಡಿದರು. ನಂತರ ಪ್ರಕರಣ ಹೈಕೋರ್ಟ್‌ಗೆ ವರ್ಗವಾಯಿತು.
2007 ಅಕ್ಟೋಬರ್ 4: 2007ರ ಅಕ್ಟೋಬರ್ 4 ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗಿಯ ಪೀಠ ಆತನನ್ನು ದೋಷಿ ಎಂದರೂ, ಗಲ್ಲು ಶಿಕ್ಷೆ ವಿಚಾರದಲ್ಲಿ ನ್ಯಾಯಾಧೀಶರ ಮಧ್ಯೆ ಒಮ್ಮತ ಮೂಡಲಿಲ್ಲ. ನ್ಯಾ. ವಿಜಿ ಸಭಾಹಿತ್ ಗಲ್ಲು ಶಿಕ್ಷೆ ಎತ್ತಿ ಹಿಡಿದರೆ, ನ್ಯಾ. ರವಿ ಬಿ ನಾಯಕ್ ಜೀವಾವಧಿ ಶಿಕ್ಷೆ ನೀಡಿದರು. ಹೀಗಾಗಿ ಗೊಂದಲ ಬಗೆಹರಿಸಲು 3ನೇ ನ್ಯಾಯಮೂರ್ತಿಯಾಗಿ ಎಸ್.ಆರ್. ಬನ್ನುರ್‌ಮಠ್ ಅವರನ್ನು ನೇಮಕ ಮಾಡಲಾಯಿತು. 18 ಫೆ. 2009ರಲ್ಲಿ ಅವರು ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದರು.
✍ವಿ.ಕ