ಬೆಂಗಳೂರು: ಕರ್ನಾಟಕದಲ್ಲಿ ಈ ವರ್ಷದ ಮಾನ್ಸೂನ್ ಮುಕ್ತಾಯವಾಗಿದ್ದರೂ ಇನ್ನೆರಡು ದಿನ ಮಳೆ ಮುಂದುವರೆಯಲಿದೆ. ಮಲೆನಾಡು, ಕರಾವಳಿಯಲ್ಲಿ ಇಂದು ಮತ್ತು ನಾಳೆ ಹಗುರವಾದ ಮಳೆಯಾಗಲಿದ್ದು, ಅ. 5ರಿಂದ 2 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ.
ಇಂದು ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆಯಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಹಾಗೇ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗಿನಲ್ಲಿ ಅ. 5 ಮತ್ತು 6ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಅ. 5 ಮತ್ತು 6ರಂದು ಮಳೆ ಹೆಚ್ಚಾಗುವ ನಿರೀಕ್ಷೆಯಿದೆ.
ಇಂದು ಮತ್ತು ನಾಳೆ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ನಾಳೆಯಿಂದ ಮಳೆ ಕೊಂಚ ಹೆಚ್ಚಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಶೇ. 8ರಷ್ಟು ಕಡಿಮೆ ಮಳೆಯಾಗಿದೆ. ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಆ. 4, 5ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೀದರ್, ಕೊಪ್ಪಳ, ರಾಯಚೂರು, ಕಲಬುರ್ಗಿ, ವಿಜಯಪುರ, ಧಾರವಾಡ, ಗದಗ ಇತ್ಯಾದಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವುದರಿಂದ ಅ. 6ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.