ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೇಗಾದರೂ ಸರಿ ಮುಖ್ಯಮಂತ್ರಿ ಆಗಬೇಕು ಅನ್ನೋ ಹುಚ್ಚು. ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿಯವರನ್ನು ಹೇಗಾದರೂ ಸೆಳೆದುಕೊಳ್ಳಬೇಕು ಅನ್ನೋ ಹುಚ್ಚು ಇದೆ. ಈ ಇಬ್ಬರೂ ಹುಚ್ಚರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಹುಚ್ಚು ಕನಸಿದೆ. ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದು ಏಕೆ ಎಂಬುದನ್ನು ಅವರು ಮತ್ತೊಮ್ಮೆ ಯೋಚಿಸಲಿ ಎಂದು ಸವಾಲೆಸೆದರು.
ಇಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಹುಚ್ಚು ಇರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದರು.