ಉಡುಪಿ: ಐಎಎಸ್ ಐಪಿಎಸ್ ಅಧಿಕಾರಿಗಳು ಮಾತ್ರವಲ್ಲ, ಪಿಡಿಒಗಳಿಂದ ಹಿಡಿದು ರಾಷ್ಟ್ರಪತಿಯವರೆಗೂ ಆರ್‌ಎಸ್‌ಎಸ್‌ನವರು ಇದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಬುಧವಾರ ಮಣಿಪಾಲದ ಸಿದ್ಧಿ ವಿನಾಯಕ ದೇವಾಸ್ಥಾನದ ಬಳಿಯ ಸ್ವರ್ಣಾ ನದಿಗೆ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಆರ್‌ಎಸ್‌ಎಸ್ ಹಿನ್ನೆಲೆಯ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರಬಹುದು. ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿದ್ದು, ಎಲ್ಲರೂ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿರುಗೇಟು ನೀಡಿದರು.
‘ಅಪ್ಪ ಮಕ್ಕಳು’ ಬೇರೆ ಬೇರೆ ಸಂದರ್ಭಗಳಲ್ಲಿ ಆರ್‌ಎಸ್‌ಎಸ್ ಸಂಸ್ಥೆಯನ್ನು ಬಳಕೆ ಮಾಡಿಕೊಂಡಿದ್ದಾರೆ. ಖುಷಿ ಬಂದಂತೆ ಬಳಕೆ ಮಾಡಿಕೊಳ್ಳುವ ಸಂಸ್ಥೆ ಆರ್‌ಎಸ್‌ಎಸ್ ಅಲ್ಲ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರಕಟ್ಟುವ ಕಾರ್ಯ ಮಾಡುತ್ತಿರುವ ದೇಶದ ಏಕೈಕ ಸಂಸ್ಥೆ ಆರ್‌ಎಸ್‌ಎಸ್ ಎಂದು ಸುನೀಲ್ ಕುಮಾರ್ ಹೇಳಿದರು.