ಮಂಗಳೂರು: ನಗರದ ಮೋರ್ಗನ್ಸ್‌ಗೇಟ್‌ನಲ್ಲಿ ಉದ್ಯಮಿ ಹಾರಿಸಿದ ಗುಂಡು ತಗುಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾನೆ.
ಉದ್ಯಮಿ ರಾಜೇಶ್ ಪ್ರಭು ಎಂಬಾತನ ಪುತ್ರ ಸುಧೀಂದ್ರ (16) ಮೃತ ಬಾಲಕ. ಅ.5ರಂದು ತಂದೆಯಿಂದಲೇ ಗುಂಡೇಟಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮರುದಿನ ಆತನ ಮೆದುಳು ನಿಷ್ಕ್ರಿಯಗೊಂಡ ವಿಷಯವನ್ನು ವೈದ್ಯರು ಘೋಷಿಸಿದ್ದರು. ಶುಕ್ರವಾರ ನಸುಕಿನಜಾವ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ತಂದೆ ರಾಜೇಶ್ ಪ್ರಭು ಅವರನ್ನು ನಿನ್ನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರ ಜಟಾಪಟಿ ನಡೆದಿದೆ ಎನ್ನಲಾಗಿದೆ. ರಾಜೇಶ್ ಪ್ರಭು ಸಿಟ್ಟಿನಿಂದ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದು ಅದು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ. ಕಚೇರಿ ಹೊರ ಭಾಗದಲ್ಲಿ ಘಟನೆ ನಡೆದಿದ್ದು ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸುಧೀಂದ್ರನ ಹಣೆಗೆ ಗುಂಡು ಬಿದ್ದು ಗಂಭೀರ ಗಾಯಗೊಂಡಿದ್ದ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.