ಉಳ್ಳಾಲ: ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮುನ್ನೂರು ಗ್ರಾಪಂ ಸದಸ್ಯನ ವಿರುದ್ಧ ನಿನ್ನೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.
ಘಟನೆಯು 20 ದಿನದ ಹಿಂದೆ ನಡೆದಿದ್ದು, ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸಂತೃಸ್ತ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಸಲೀಲೆ ದೃಶ್ಯವು ಅಧ್ಯಕ್ಷರ ಕೊಠಡಿಯಲ್ಲಿದ್ದ ಸಿಸಿಟಿವಿ ಯಲ್ಲಿ ದಾಖಲಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ:
ನಿವೇಶನ ರಹಿತ ಮಹಿಳೆಯೊಬ್ಬರು ಸೆ.18ರಂದು ಸೈಟ್‌ಗೆ ಅರ್ಜಿ ನೀಡಲೆಂದು ಮುನ್ನೂರು ಗ್ರಾಪಂಗೆ ತೆರಳಿದ್ದರು. ಈ ವೇಳೆ ಪಂಚಾಯಿತಿ ಸದಸ್ಯ ಆರೋಪಿ ಬಾಬು ಶೆಟ್ಟಿ ಮಹಿಳೆಯನ್ನು ಅಧ್ಯಕ್ಷರ ಕೊಠಡಿಗೆ ಕರೆದುಕೊಂಡು ಹೋಗಿದ್ದನು.
ಹಾಗೂ ಮಹಿಳೆಯ ಜೊತೆಗೆ ಬಂದ ಮಕ್ಕಳನ್ನು ಹೊರಗೆ ಕಳುಹಿಸಿ, ಅಧ್ಯಕ್ಷರು ಕೊಠಡಿಗೆ ಬರುವವರೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಫ್‌ಐ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು.
ಈ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.