ಉಪ್ಪಿನಂಗಡಿ: ರಸ್ತೆ ದಾಡುತ್ತಿದ್ದ ಮಹಿಳೆ ಮತ್ತು ಪುಟ್ಟ ಮಗುವಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಹರಿದು ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿಯ ಬಸ್ಸ್ ನಿಲ್ದಾಣದಲ್ಲಿ ನಡೆದಿದೆ.
ಮೃತರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಸಾಹಿದಾ(25) ಮತ್ತು ಅವರ ಮಗು ಸಾಹಿಲ್ (1) ಎಂದು ತಿಳಿದು ಬಂದಿದೆ
ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ತನ್ನ ಮಗನೊಂದಿಗೆ ತೆರಳುತ್ತಿದ್ದರು. ಈ ಸಂದರ್ಭ ಬಸ್ ನಿಲ್ದಾಣಕ್ಕೆ ತಿರುಗುವಲ್ಲಿರುವ ನಂದಿನಿ ಹಾಲಿನ ಬೂತ್ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ . ಅತಿ ವೇಗದಿಂದ ಬಸ್ ನಿಲ್ದಾಣದೊಳಗೆ ಬಂದ ಸರಕಾರಿ ಬಸ್ ತಾಯಿ ಮಗುವಿಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ . ಬಸ್ಸುಗಳ ನಡುವಿನ ಪೈಪೋಟಿಯೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಪ್ರತಿಭಟಿಸಿದ್ದು , ಬಸ್ಸು ನಿಲ್ದಾಣದ ಒಳಗೆ ಯಾವ ಬಸ್ಸುಗಳೂ ಪ್ರವೇಶಿಸದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ . ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು , ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.