ಉಪ್ಪಿನಂಗಡಿ: ಮೆಸ್ಕಾಂ ಸಿಬ್ಬಂದಿಗಳ ಮೇಲೆ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಅ 15 ರಂದು ಸಂಜೆ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ನಡೆದಿದೆ. ದೊಣ್ಣೆಯಿಂದ ಹಲ್ಲೆ ನಡೆಸಿದಾತನನ್ನು ಉಪ್ಪಿನಂಗಡಿ ಗ್ರಾಮದ ಪರಾರಿ ನಿವಾಸಿ ಈಸುಬು ಎಂದು ತಿಳಿದುಬಂದಿದೆ.
ಉಪ್ಪಿನಂಗಡಿ ಮೆಸ್ಕಾಂ ಕಚೇರಿಯ ಸಿಬಂದಿಗಳಾದ ಜೂನಿಯರ್ ಲೈನ್ ಮ್ಯಾನ್ ವಿತೇಶ್ ಮತ್ತು ಸಿಬ್ಬಂದಿ ಸತೀಶ್ ಹಿರೆಬಂಡಾಡಿ ಹಲ್ಲೆಗೊಳಗಾದವರು.ಹಲ್ಲೆಗೊಳಗಾಗಿ ಗಾಯಗೊಂಡಿರುವ ಅವರಿಬ್ಬರು ಪುತ್ತೂರು ಸರಕಾರಿ ಆಸ್ಫತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯ ವಿವರ: ಈಸುಬು ಬಳಿ ಸುಮಾರು 50 ಆಡುಗಳಿದ್ದು ಅದನ್ನು ಅವರು ನಿತ್ಯ ಉಪ್ಪಿನಂಗಡಿ ಪೇಟೆ ಹಾಗೂ ಇತರೆಡೆ ಮೇಯಿಸುತ್ತಾರೆ ಎಂದು ಹೇಳಲಾಗುತ್ತಿದೆ.ಇದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಗಿ, ಸಣ್ಣಪುಟ್ಟ ಅಪಘಾತಗಳು ನಡೆದ ಹಲವು ಘಟನೆಗಳು ನಡೆದು ವಾಗ್ವಾದದಲ್ಲಿ ಮುಕ್ತಾಯಗೊಂಡಿದೆ ಎನ್ನಲಾಗಿದೆ.
ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ಸುಮಾರು 30-40 ಆಡುಗಳು ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ಹೊಕ್ಕು ಅಲ್ಲಿದ್ದ ಹೂವಿನ ಗಿಡ ಹಾಗೂ ಇತರೆ ಗಿಡಗಳನ್ನು ತಿಂದಿವೆ.ಈ ಸಂದರ್ಭ ಅಲ್ಲಿದ್ದ ಸಿಬಂದಿಗಳು ಆಡುಗಳನ್ನು ಓಡಿಸಿದ್ದು, ಅಗ ಆಡುಗಳು ಚೆಲ್ಲಾಪಿಲ್ಲಿಯಾಗಿ ಓಡಿವೆ. ಇದರಿಂದ ಕೆರಳಿದ ಈಸುಬು ದೊಣ್ಣೆ ಹಿಡಿದುಕೊಂಡು ಮೆಸ್ಕಾಂ ಕಚೇರಿ ಬಳಿ ಬಂದಿದ್ದು ಅದೇ ವೇಳೆ ಲೈನ್ ಮ್ಯಾನ್ ವಿತೇಶ್ʼ ರವರು ಲೈನ್ ನಲ್ಲಿದ್ದ ವಿದ್ಯುತ್ ಸಮಸ್ಯೆ ದುರಸ್ತಿ ಮಾಡಿ ಕಚೇರಿಗೆ ಬಂದಿದ್ದಾರೆ.
ಬೈಕ್ ನಿಲ್ಲಿಸಿ ಕಛೇರಿ ಅವರಣದೊಳಗೆ ವಿತೇಶ್ ಪ್ರವೇಶ ಮಾಡುತ್ತಲೇ ದೊಣ್ಣೆ ಹಿಡಿದು ನಿಂತಿದ್ದ ಈಸುಬು ರವರು ಮೇಸ್ಕಂ ಸಿಬ್ಬಂದಿಯ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ವಿತೇಶ್ ರವರ ರಕ್ಷಣೆಗೆ ಬಂದ ಕಚೇರಿ ಸಿಬಂದಿ ಸತೀಶ್ ಅವರ ಮೇಲೂ ಈಸುಬು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.