ಚಿಕ್ಕಮಂಗಳೂರು: ಆಯುಧ ಪೂಜೆ, ವಿಜಯ ದಶಮಿ ಬೆನ್ನಲ್ಲೇ ವೀಕೆಂಡ್, ಹೀಗೆ ಸಾಲು ಸಾಲು ರಜೆಗಳ ಕಾರಣದಿಂದ ಜನರು ಪ್ರವಾಸಿ ಸ್ಥಳಗಳತ್ತ ಮುಖ ಮಾಡಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣ ಚಿಕ್ಕಮಗಳೂರಿನಲ್ಲಿ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಬಹಳಷ್ಟು ಟ್ರಾಫಿಕ್ ಜಾಮ್ ಎದುರಾಗಿದೆ.
ಇದೇ ಸಂದರ್ಭ ಕೊಟ್ಟಿಗಹಾರ ಸಮೀಪದ “ದೇವರಮನೆ” ಎಂಬ ಪ್ರವಾಸಿ ಸ್ಥಳಕ್ಕೆ ಹೋಗುವ ಕಿರಿದಾದ ದಾರಿಯಲ್ಲಿ ಕಾರೊಂದು ಕೆಟ್ಟು ನಿಂತ ಕಾರಣ, ಎದುರಿನಿಂದ ಬಂದ ಬಸ್ಸ್ ಸೈಡ್ ಕೊಟ್ಟು ಸಾಗುವ ಭರದಲ್ಲಿ ರಸ್ತೆಬದಿಯ ಹೊಂಡಕ್ಕೆ ಬಿದ್ದು ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಆ ಸಂದರ್ಭದಲ್ಲಿ ಅದೇ ದಾರಿಯಿಂದಾಗಿ ಹೋದ ಪುತ್ತೂರಿನ ಯುವಕರ ತಂಡ ಧಾರಾಕಾರ ಮಳೆಯನ್ನು ಲೆಕ್ಕಿಸದೇ ಕಾರನ್ನು ರಸ್ತೆಬದಿಗೆ ತಳ್ಳಿ, ಇಕ್ಕಟ್ಟಿನಲ್ಲಿ ಸಿಲುಕಿದ್ದ ಬಸ್ಸ್ ಸುಗಮ ಸಂಚಾರವಾಗಲು ಅನುವು ಮಾಡಿಕೊಟ್ಟಿದ್ದಾರೆ. ಕರಾವಳಿಯ ಈ ಯುವಕರ ಕಾರ್ಯಕ್ಕೆ ಅಲ್ಲಿನ ಮಂದಿ ಮೆಚ್ಚುಗೆ ಸೂಚಿಸಿದ್ದು, ಮಳೆಯನ್ನು ಲೆಕ್ಕಿಸದೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಯುವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.