ಸುಳ್ಯ: ಕೆಲ ತಿಂಗಳ ಹಿಂದೆ ಹಲವು ಜೀವಗಳನ್ನು ಬಲಿ ಪಡೆದಿದ್ದ ಸುಳ್ಯ ಸಮೀಪದ ಅಡ್ಕಾರಿನಲ್ಲಿ ಇಂದು ಬೆಳಗ್ಗೆ ಮತ್ತೊಂದು ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಟಾಕ್ಸಿ ಕಾರಿನಲ್ಲಿದ್ದವರು ಅದೃಷ್ಟವಷಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಿಸುತ್ತಿದ್ದ ಟೊಯೋಟ Etios ಕಾರು, ಚಾಲಕನ ನಿಯಂತ್ರಣ ತಪ್ಪಿ ಅಡ್ಕಾರು ಬಳಿ ಪಲ್ಟಿಯಾಗಿದೆ. ಕಾರು ಅತೀ ವೇಗದಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ 4 ಮಂದಿಗೆ ಗಾಯಗಳಾಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇದೇ ಸ್ಥಳದಲ್ಲಿ ವರ್ಷದ ಹಿಂದೆ ಮಡಿಕೇರಿಯಿಂದ ಮಂಗಳೂರಿಗೆ ಬಂದು ವಾಪಾಸಾಗುತ್ತಿದ್ದ ಒಂದೇ ಕುಟುಂಬದ 4 ಮಂದಿ ಅಪಘಾತಕ್ಕೆ ಬಲಿಯಾಗಿದ್ದರು. ಅದಾದ ಕೆಲ ತಿಂಗಳ ನಂತರ ಮತ್ತೊಂದು ಭೀಕರ ಅಪಘಾತದಲ್ಲಿ, ಮದುವೆ ನಿಶ್ಚಯವಾಗಿದ್ದ ಇಬ್ಬರು ಯುವಕರ ಸಹಿತ ಯುವತಿಯೊಬ್ಬಳು ದಾರುಣ ಮೃತಪಟ್ಟಿದ್ದರು. ಇಲ್ಲಿ ಅಪಘಾತ ತಡೆಗೆ ಬ್ಯಾರಿಕೇಡ್ ಹಾಕಿದ್ದರೂ ಕೂಡ ಪದೇ ಪದೇ ಅದೇ ಸ್ಥಳದಲ್ಲಿ ಅಪಘಾತ ಸಂಭವಿಸುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.