ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಿ ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಗೇರುಕಟ್ಟೆ ಪರಪ್ಪು ನಿವಾಸಿ ಮುತ್ತಪ್ಪ ಶೆಟ್ಟಿ (70) ಎಂದು ತಿಳಿದು ಬಂದಿದೆ.
ಉರುವಾಲು ನಿವಾಸಿಗಳಾದ ಹಂಝ ಮತ್ತು ಅಶ್ರಫ್ ಎಂಬವರು ಕಾರಿನಲ್ಲಿ ಸೇತುವೆ ಮೇಲಿಂದ ಹಾದು ಹೋಗುತ್ತಿದ್ದಾಗ ವೃದ್ಧರೋರ್ವರು ಸೇತುವೆಯಿಂದ ನದಿಗೆ ಹಾರುವುದನ್ನು ಗಮನಿಸಿದ್ದು, ತಕ್ಷಣ ಕಾರು ನಿಲ್ಲಿಸಿ, ಸೇತುವೆಯ ಇನ್ನೊಂದು ತುದಿಯಲ್ಲಿ ಇದ್ದ ಯು.ಟಿ. ಫಯಾಝ್ ಮತ್ತು ರಶೀದ್ ಕಡವಿನಬಾಗಿಲು ಇವರಿಗೆ ಮಾಹಿತಿ ನೀಡಿದ್ದು, ಈ ನಾಲ್ವರೂ ನದಿಗೆ ಧುಮುಕಿ ನದಿ ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ.
ನದಿಗೆ ಹಾರಿದ್ದ ವೃದ್ಧ ನೀರಿನ ಆಳಕ್ಕೆ ಹೋಗಿ ಮತ್ತೆ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿದ ಇವರು ಈಜುತ್ತಲೇ ಹೋಗಿ ವೃದ್ಧನನ್ನು ಹಿಡಿದು ರಕ್ಷಿಸಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ವೃದ್ಧನ ಪ್ರಾಣಪಕ್ಷಿ ಹಾರಿಹೋಗಿತ್ತು. ಬಳಿಕ ಮೃತದೇಹವನ್ನು ಉಪ್ಪಿನಂಗಡಿ ಆಸ್ಪತ್ರೆಗೆ ರವಾನಿಸಿದ್ದಾರೆ.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.