ಬೆಳಗಾವಿ: ಹೊರವಲಯದ ಯಮನಾಪುರ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯ ಕೋಳಿಮಾಂಸದ ಅಂಗಡಿ ಮೇಲೆ ಹಿಂದೂ ಯುವಕರ ಗುಂಪೊಂದು ದಾಳಿ ಮಾಡಿ, ಮಾಲೀಕರ ಮೇಲೆ ಹಲ್ಲೆ ನಡೆಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‘ಅಲ್ಲಿನ ಭರಮದೇವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷ ಪೂಜೆ ನೆರವೇರಿಸಲಾಗುತ್ತಿತ್ತು.
ಈ ವೇಳೆ, ಸಮೀಪದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಗಲಾಟೆ ಶುರು ಮಾಡಿದ್ದಾರೆ. ಮಾಲೀಕ ಮತ್ತು ಸಹಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.‘ಪ್ರಸಾದ ಹಂಚುವ ಸಮಯದಲ್ಲಿ ಮಾಂಸ ಮಾರುವ ಮೂಲಕ ತಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಂಗಡಿ ತೆರೆಯದಂತೆ ತಿಳಿಸಿದ್ದರೂ ಕೇಳಿಲ್ಲ. ಇಂಥವರಿಗೆ ಬುದ್ಧಿ ಕಲಿಸುತ್ತಿದ್ದೇವೆ.
ಸರ್ಕಾರವೂ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೊ ಮಾಡಿದ್ದಾರೆ. ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದಾರೆ. ದುಷ್ಕರ್ಮಿಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಕಿದ್ದರು. ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಿಂದ ಅಳಿಸಿದ್ದಾರೆ’ ಎಂದು ದೂರಲಾಗಿದೆ.ಆದರೆ, ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹಲ್ಲೆ ನಡೆಸಿದ ಯುವಕರನ್ನು ಕರೆಸಿ ರಾಜಿ ಮಾಡಿಸಿದ್ದಾರೆ ಎಂದು ದೂರಲಾಗುತ್ತಿದೆ.