ಸುಳ್ಯ: ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಮಾಡಲು ನಿರ್ಧರಿಸಿದ್ದೇವೆ. ಯಾವುದೇ ಕಾರಣಕ್ಕೂ ಮಾತೃ ಧರ್ಮಕ್ಕೆ ಮರಳುವುದಿಲ್ಲ. ಕೇರಳದ ಕಣ್ಣೂರಿನ ನನ್ನ ಮನೆಯವರು ಇಸ್ಲಾಂ ತೊರೆದು ಮರಳಿ ಬರುವುದಾದರೆ ಮನೆಗೆ ಸೇರಿಸುವುದಾಗಿ ತಿಳಿಸಿದ್ದಾರೆ.
ಆದರೆ ನಾನು ಮರಳಿ ಹೋಗುವುದಿಲ್ಲ. ಸದ್ಯಕ್ಕೆ ಸುಳ್ಯದಲ್ಲೇ ಇದ್ದು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ಆಸಿಯಾ ತಿಳಿಸಿದ್ದಾರೆ.ಆಸಿಯಾ ಪ್ರಕರಣ ಎಂದೇ ಸುದ್ದಿಯಲ್ಲಿರುವ ಸುಳ್ಯದ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್- ಆಸಿಯಾ ಪ್ರಕರಣ ಇನ್ನೊಂದು ತಿರುವು ಪಡೆದುಕೊಂಡಿದ್ದು, ಪರಸ್ಪರ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.
ಹಲವು ಹೋರಾಟಗಳ ನಡುವೆಯೂ ಇಬ್ರಾಹಿಂ ಖಲೀಲ್ ಮತ್ತು ಆತನ ಮನೆಯವರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೇ ಇರುವುದರಿಂದ ಮುಂದಕ್ಕೆ ಹೋರಾಟವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಇಬ್ರಾಹಿಂ ಖಲೀಲ್ನಿಂದ ದೂರ ಉಳಿದು ಬದುಕುವ ನಿರ್ಧಾರಕ್ಕೆ ಬಂದಿದ್ದೇನೆ. ಅಲ್ಲದೆ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಆಸಿಯಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾತಿ ಮತ ಬೇಧ ಮರೆತು ಅನೇಕ ಹಿಂದೂ, ಮುಸ್ಲಿಂ ಸಂಘಟನೆಗಳು ನನ್ನ ಹೋರಾಟಕ್ಕೆ ಕೈ ಜೋಡಿಸಿ ನಮ್ಮನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಇದ್ಯಾವ ಹೋರಾಟಕ್ಕೂ ಬಗ್ಗದ ಇಬ್ರಾಹಿಂ ಖಲೀಲ್ ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ನಿರಂತರವಾಗಿ ಹೋರಾಟ ಮಾಡಿದ್ದು, 43 ದಿನಗಳ ಕಾಲ ಸುಳ್ಯದ ಕಟ್ಟೆಕ್ಕಾರ್ ಕುಟುಂಬದ ಮನೆಯಲ್ಲಿ ವಾಸವಾಗಿದ್ದೆ. ಆದರೆ ನನ್ನ ಮನವಿಗೆ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಇದೀಗ ಅನಿವಾರ್ಯವಾಗಿ ಹೋರಾಟದಿಂದ ಹಿಂದೆ ಸರಿದು ಮುಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಮಾತೃ ಧರ್ಮಕ್ಕೆ ಮರಳುವುದಿಲ್ಲ:ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಮಾಡಲು ನಿರ್ಧರಿಸಿದ್ದೇವೆ. ಯಾವುದೇ ಕಾರಣಕ್ಕೂ ಮಾತೃ ಧರ್ಮಕ್ಕೆ ಮರಳುವುದಿಲ್ಲ. ಕೇರಳದ ಕಣ್ಣೂರಿನ ನನ್ನ ಮನೆಯವರು ಇಸ್ಲಾಂ ತೊರೆದು ಮರಳಿ ಬರುವುದಾದರೆ ಮನೆಗೆ ಸೇರಿಸುವುದಾಗಿ ತಿಳಿಸಿದ್ದಾರೆ. ಆದರೆ ನಾನು ಮರಳಿ ಹೋಗುವುದಿಲ್ಲ. ಸದ್ಯಕ್ಕೆ ಸುಳ್ಯದಲ್ಲೇ ಇದ್ದು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನಂತೆ ನೊಂದವರ ಪರವಾಗಿ ಹೋರಾಟ:ನನ್ನಂತಹ ಪರಿಸ್ಥಿತಿ ಯಾವ ಮಹಿಳೆಗೂ ಬರಬಾರದು. ಮದುವೆಯಾಗುವಾಗ ಕೇವಲ ಮಾತಿಗೆ ಮರಳಾಗದೆ ಪರಿಶೀಲನೆ ನಡೆಸಿ, ಸಾಕಷ್ಟು ಯೋಚಿಸಿ ಮುಂದುವರಿಯಿರಿ ಎಂದು ಸಲಹೆ ನೀಡಿದ ಅವರು, ನನ್ನಂತೆ ಹಲವಾರು ಮಹಿಳೆಯರು ಸಂಕಷ್ಟ ಅನುಭವಿಸಿ ನೋವನ್ನು ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂತಹಾ ಮಹಿಳೆಯರ ಪರವಾಗಿ ಹೋರಾಟ ನಡೆಸಿ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇನೆ ಎಂದು ಆಸಿಯಾ ಹೇಳಿದರು. ಮುಂದಕ್ಕೆ ಈ ಪ್ರಕರಣವನ್ನು ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ. ಹಾಗಾಗಿ ಮುಂದೆ ನನ್ನ ವಿಚಾರದಲ್ಲಿ ಯಾರೂ ಹೇಳಿಕೆಗಳನ್ನು ನೀಡಬಾರದು. ನನಗೂ ಕಟ್ಟೆಕ್ಕಾರ್ ಇಬ್ರಾಹಿಂ ಖಲೀಲ್ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಈ ಮೊದಲು ಪೊಲೀಸ್ ಠಾಣೆಯಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ದಾಖಲಿಸಿರುವ ದಾವೆಯನ್ನು ಸ್ವ ಇಚ್ಛೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು.
ಸುಳ್ಯದ ಪ್ರತಿಷ್ಠಿತ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವರು ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯ ಪರಿಚಯವಾಗಿ ಬಳಿಕ ಆಕೆಯನ್ನು ಮದುವೆಯಾಗಿದ್ದರು. ಯುವತಿ ಮತಾಂತರವಾದ ಬಳಿಕ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದಳು. ಮದುವೆಯಾಗಿ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರು ಪರಸ್ಪರ ಬೇರೆಯಾಗಿದ್ದರು. ಆದರೆ ಇಬ್ರಾಹಿಂ ಖಲೀಲ್ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಸಿದ್ಧರಿರಲಿಲ್ಲ. ಈ ಬಗ್ಗೆ ಯುವತಿ ಆಸಿಯಾ ಸತತ ಹೋರಾಟ ನಡೆಸಿ ಸುದ್ದಿಗೋಷ್ಠಿ ನಡೆಸಿ ಮದುವೆಯಾಗಿರುವ ದಾಖಲೆಗಳನ್ನು ತೋರಿಸಿದ್ದರು. ಅಲ್ಲದೆ ಸುಳ್ಯದ ಕಟ್ಟೆಕ್ಕಾರ್ ನಲ್ಲಿರುವ ಇಬ್ರಾಹಿಂ ಖಲೀಲ್ ಗೆ ಸೇರಿದ ಫುಟ್ ವೇರ್ ನಲ್ಲಿ ರಾತ್ರಿ ಇಡೀ ವಾಸ್ತವ್ಯ ಹೂಡಿದ್ದು, ಈ ಪ್ರಕರಣ ದೊಡ್ಡ ಸುದ್ದಿಯಾಗಿತ್ತು.