ಮಂಗಳೂರು: ಎನ್ ಆರ್ ಸಿ, ಸಿಎಎ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರದ್ದು, ಯಾವುದೇ ತಪ್ಪಿಲ್ಲ ಎಂದು ಸರಕಾರ ಹೈಕೋರ್ಟ್ ಗೆ ತಿಳಿಸಿದೆ.
ನಿನ್ನೆ ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಈ ಮಾಹಿತಿ ನೀಡಿದೆ. ಗೋಲಿಬಾರ್ ಘಟನೆ ಸಂಬಂಧಪಟ್ಟಂತೆ ಒಟ್ಟು 600ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಕೋರ್ಟ್’ಗೆ ಸಲ್ಲಿಕೆಯಾಗಿತ್ತು.
2019ರ ಡಿಸೆಂಬರ್ 19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನೌಶೀನ್ ಮತ್ತು ಜಲೀಲ್ ಎಂಬಿಬ್ಬರು ಪೊಲೀಸ್ ಗುಂಡಿಗೆ ಬಲಿಯಾಗಿದ್ದರು.
ಆಗಿನ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ತನಿಖೆಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಇದೀಗ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪೊಲೀಸರು ಸೇರಿದಂತೆ ಯಾರೂ ಕೂಡ ತಪ್ಪಿತಸ್ಥರಲ್ಲ ಎಂದು ಮ್ಯಾಜಿಸ್ಟ್ರೇಟ್ ತನಿಖಾ ವರದಿ ಹೇಳಿದೆ.