ಕಾರ್ಕಳ: ಜಮೀನಿನಲ್ಲಿ ನಿಧಿ ಇದೆ ಎಂದು ಹೇಳಿ ತೆಗೆದುಕೊಡುವುದಾಗಿ ನಂಬಿಸಿ ಮೋಸ ಮಾಡಿ ಹಣ ಲಪಟಾಯಿಸಿದ ಘಟನೆ ಕಾರ್ಕಳ ಕುಕ್ಕಂದೂರು ದೇವಸ್ಥಾನ ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಕಲ್ಲೇನಹಳ್ಳಿ ನಿವಾಸಿಗಳಾದ ಓಬಯ್ಯ ಹಾಗು ಆಜೇಯ ಬಂಧಿತ ಆರೋಪಿಗಳಾಗಿದ್ದಾರೆ. ಕಾರ್ಕಳ ಕುಕ್ಕಂದೂರು ದೇವಸ್ಥಾನ ಬಳಿ ವಾಸವಾಗಿರುವ ಕೃಷ್ಣ ನಾಯ್ಕ ಎಂಬವರ ಮನೆಗೆ ಬಂದ ಇಬ್ಬರು ಆರೋಪಿಗಳು ಜಮೀನಿನಲ್ಲಿ ನಿಧಿ ಇದೆ ಎಂದು ಹೇಳಿ ಅದನ್ನು ತೆಗೆಯಲು ಪೂಜೆ ಹೋಮಗಳನ್ನು ಮಾಡಬೇಕು. ಇದಕ್ಕಾಗಿ 1ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕಾಗಿ 95 ಸಾವಿರ ರೂಪಾಯಿ ತೆಗೆದುಕೊಂಡು ಮತ್ತೆ ಉಳಿದ 5 ಸಾವಿರ ರೂಪಾಯಿ ಪಡೆದುಕೊಂಡು ಜಮೀನಿನ ಮೊಲೆಯಲ್ಲಿ ಮೂಲೆಯಲ್ಲಿ ಗುಂಡಿ ತೋಡಿ ಅದರಿಂದ ಒಂದು ದೇವರ ಮುಖವಾಡ ಮತ್ತು ಹಿತ್ತಾಳೆಯ ಶಂಖ ವನ್ನು ತೆಗೆದು ಕೃಷ್ಣ ನಾಯ್ಕ್ ರವರಿಗೆ ಕೊಟ್ಟು ದೇವರ ಕೋಣೆಯಲ್ಲಿ ಇಡಿ ಎಂದು ಹೇಳಿ ಬಂದ ಕಾರಿನಲ್ಲಿ ಹೋಗಿದ್ದಾರೆ.
ಇವರ ವರ್ತನೆಯಿಂದ ಸಂಸಯಗೊಂಡ ಮನೆ ಮಾಲಿಕ ಕಾರ್ಕಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.