ಬೆಂಗಳೂರು: ಪುನೀತ್ ರಾಜ್ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದು ತಮಿಳು ನಟ ವಿಶಾಲ್ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದಿಂದ 1800 ಮಕ್ಕಳ ಜವಾಬ್ದಾರಿ ನನ್ನದು ಎಂದು ಅವರು ತಿಳಿಸಿದ್ದಾರೆ.
ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ಅಕ್ಟೋಬರ್ 29 ರಂದು ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ತಾನು ಹೊರುವುದಾಗಿ ತಮಿಳು ನಟ ಹೇಳಿದ್ದಾರೆ. ವಿಶಾಲ್ ಅವರ ವಿಶಾಲವಾದ ಮನಸ್ಸಿಗೆ ಕನ್ನಡಿಗರು ಅಭಿಮಾನದ ಹೊಳೆ ಹರಿಸಿದ್ದಾರೆ. ಇದೇ ವೇಳೆ ಯಾವೊಬ್ಬ ನಟನು, ಯಾವ ರಾಜಕಾರಣಿಗೂ ಇಂತಹ ಮನಸ್ಸು ಬರಲಿಲ್ಲವಲ್ಲ ಎಂದು ವ್ಯಥೆ ಪಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ 1800 ಮಕ್ಕಳನ್ನು ಓದಿಸುತ್ತಿದ್ದರು. ಇದೀಗ ಪುನೀತ್ ನಿರ್ವಹಿಸುತ್ತಿದ್ದ ಜವಾಬ್ದಾರಿ ನಾನು ಹೊರುವುದಾಗಿ ವಿಶಾಲ್ ಹೇಳಿಕೆ ನೀಡಿದ್ದಾರೆ. ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಅವರು ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನಾನಂತರ ಹೆಚ್ಚು ಹೆಚ್ಚು ಬಯಲಾಗುತ್ತಿದೆ. ಈ ಬಗ್ಗೆ ಪುನೀತ್ ಬಗ್ಗೆ ಅಭಿಮಾನದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.