ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು ಬೆಳಗ್ಗೆ 7.40ರ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿ ಈಡಿಗ ಸಂಪ್ರದಾಯದಂತೆ ನಡೆಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ತಮ್ಮ ತಂದೆ ತಾಯಿಯ ಸಮಾದಿಯ ಪಕ್ಕದಲ್ಲೇ ಮಣ್ಣಾಗಿದ್ದಾರೆ. ಕಣ್ಣೀರ ಕಡಲಲ್ಲಿ ಅಪ್ಪು ಅವರನ್ನು ಕುಟುಂಬಸ್ಥರು, ಚಿತ್ರರಂಗ ಬೀಳ್ಕೊಟ್ಟಿದೆ. ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅವರು ಅಂತ್ಯಕ್ರಿಯೆಯ ವಿಧಿ ವಿಧಾನ ನೆರವೇರಿಸಿದ್ದಾರೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಮೂರು ಬಾರಿ ಕುಶಾಲು ತೋಪು ಸಿಡಿಸಿ ಅಪ್ಪುಗೆ ಗೌರವ ಸಲ್ಲಿಸಲಾಯಿತು. ವಿನಯ್ ರಾಜ್ ಕುಮಾರ್ ಅವರು ಮೂರು ಸುತ್ತು ಸಮಾಧಿ ಸುತ್ತಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ರಥದಲ್ಲಿ ಪುನೀತ್ ಶವವವನ್ನು ಮಲಗಿಸಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಮೃತದೇಹವನ್ನು ಗುಂಡಿಗೆ ಇಳಿಸಿ ಅಲ್ಲಿ ಕೆಲವೊಂದು ವಿಧಿವಿಧಾನಗಳು ನಡೆದ ನಂತರ ಅಪ್ಪುವನ್ನು ಮಣ್ಣಲ್ಲಿ ಮಣ್ಣು ಮಾಡಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.
ಕಂಠೀರವ ಸ್ಟುಡಿಯೋದಲ್ಲಿ ಕುಟುಂಬಸ್ಥರು, ಚಿತ್ರರಂಗದವರು, ಅಪ್ಪು ಆತ್ಮೀಯರ ಆಕ್ರಂದನ ಮುಗಿಲುಮುಟ್ಟಿದೆ, ದುಃಖದ ಕಟ್ಟೆ ಒಡೆದಿದೆ.
ಈಡಿಗ ಸಂಪ್ರದಾಯದಂತೆ ಪುನೀತ್ ರಾಜ್‌ಕುಮಾರ್ ಅವರನ್ನು ಮಣ್ಣು ಮಾಡಲಾಗಿದೆ. ಪುನೀತ್‌ಗೆ ಧೃತಿ, ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ಅಪ್ಪು ಸಹೋದರ ರಾಘವೇಂದ್ರ ರಾಜ್‌ಕುಮಾರ್ ಸಹೋದರ ವಿನಯ್ ರಾಜ್‌ಕುಮಾರ್ ಅವರು ಚಿಕ್ಕಪ್ಪನ ಅಂತ್ಯಕ್ರಿಯೆಯ ಎಲ್ಲ ವಿಧಿ ವಿಧಾನ ನೆರವೇರಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮುನಿರತ್ನ, ರಾಕ್ಲೈಕ್ ವೆಂಕಟೇಶ್, ಕಿಚ್ಚ ಸುದೀಪ್, ರವಿಚಂದ್ರನ್ ಮುಂತಾದವರು ಸ್ಥಳದಲ್ಲಿದ್ದು, ಪುನೀತ್ಗೆ ಅಂತಿಮ ವಿಧಾಯ ಹೇಳಿದ್ದಾರೆ. ಡಾ. ರಾಜ್ಕುಮಾರ್ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ.