ಶಿವಮೊಗ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ವೀಡಿಯೋ ಕರೆ ಮಾಡಿ, ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೇಂದ್ರ ಕಾರಾಗೃಹದ ವಾರ್ಡನ್ ಅಸ್ಪಾಕ್ ತಗಡಿ (24) ಎಂದು ಗುರುತಿಸಲಾಗಿದೆ. ಅಸ್ಪಾಕ್ ತಗಡಿ ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ನಿವಾಸಿ. ಇವರು ಕಳೆದ ಎರಡೂವರೆ ವರ್ಷದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಸ್ಪಾಕ್ ತಗಡಿಗೆ ಒಂದೂವರೆ ತಿಂಗಳ ಮಗುವಿದ್ದು, ಪತ್ನಿ ಬಾಣಂತನಕ್ಕೆ ತವರು ಮನೆಗೆ ತೆರಳಿದ್ದರು.
ವಿವಾಹವಾದ ಎರಡು ಮೂರು ತಿಂಗಳ ನಂತರದಿಂದಲೇ ಸಣ್ಣ ಪುಟ್ಟ ವಿಷಯಕ್ಕೆ ಪತಿ ಪತ್ನಿ ಇಬ್ಬರು ಜಗಳ ಆಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಸಹ ಪತ್ನಿಗೆ ವೀಡಿಯೋ ಕರೆ ಮಾಡಿದ್ದ ಅಸ್ಪಾಕ್ ತಗಡಿ ಈ ವೇಳೆಯೂ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ಅತ್ತೆ ಮಾವನೊಂದಿಗೂ ಸಹ ಜಗಳವಾಡಿದ್ದಾನೆ ಎನ್ನಲಾಗಿದೆ. ಜಗಳ ಆಡುತ್ತಿರುವಾಗಲೇ ನೇಣು ಹಾಕಿಕೊಳ್ಳುವ ದೃಶ್ಯವನ್ನು ಪತ್ನಿಗೆ ತೋರಿಸಿದ್ದಾನೆ. ಪತಿಯ ಆತ್ಮಹತ್ಯೆ ನಿರ್ಧಾರಕ್ಕೆ ಕಂಗಾಲಾದ ಪತ್ನಿ ನಂತರ ಕಾರಾಗೃಹದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಇತರೆ ಸಿಬ್ಬಂದಿ ವಸತಿಗೃಹಕ್ಕೆ ತೆರಳಿ ನೋಡುವಷ್ಟರಲ್ಲಿ ಅಸ್ಪಾಕ್ ತಗಡಿ ಕೊನೆಯುಸಿರು ಎಳೆದಿದ್ದಾನೆ.
ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.