ದುಬೈ: ಸ್ಕಾಟ್ಲೆಂಡ್ ಹಾಗೂ ಭಾರತ ತಂಡದ ನಡುವೆ ನಡೆದ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಸೆಮಿಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಈಗ ಎಲ್ಲರ ಕಣ್ಣು ಭಾನುವಾರ ನಡೆಯಲಿರುವ ಅಫ್ಗಾನಿಸ್ತಾನ ಹಾಗೂ ನ್ಯೂಜಿಲೆಂಡ್ ಪಂದ್ಯದ ಮೇಲೆ ಇಟ್ಟಿದೆ.
ಹಾಗೊಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆದ್ದರೆ ಭಾರತದ ಸೆಮಿಫೈನಲ್ ಪ್ರವೇಶದ ಕನಸು ಚಿಗುರೊಡೆಯಲಿದೆ. ಅಲ್ಲದೆ ಸೋಮವಾರ ನಮೀಬಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮಗದೊಂದು ಅಧಿಕಾರಯುತ ಗೆಲುವು ದಾಖಲಿಸಿದರೆ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಲಿದೆ.
ಸತತ ಎರಡನೇ ಗೆಲುವು ದಾಖಲಿಸಿರುವ ಭಾರತ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ನೆಗೆದಿದೆ. ಅಷ್ಟೇ ಅಂಕಗಳನ್ನು ಹೊಂದಿರುವ ಅಫ್ಗಾನಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಸ್ಕಾಟ್ಲೆಂಡ್ ಸತತ ನಾಲ್ಕನೇ ಸೋಲಿಗೆ ಶರಣಾಗಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ರವೀಂದ್ರ ಜಡೇಜ (15ಕ್ಕೆ 3), ಮೊಹಮ್ಮದ್ ಶಮಿ (15ಕ್ಕೆ 3) ಸೇರಿದಂತೆ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ತತ್ತರಿಸಿರುವ ಸ್ಕಾಟ್ಲೆಂಡ್, 17.4 ಓವರ್‌ಗಳಲ್ಲಿ 85 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಬಳಿಕ ಗುರಿ ಬೆನ್ನತ್ತಿದ ಭಾರತ ಕೆ.ಎಲ್. ರಾಹುಲ್ ಬಿರುಸಿನ ಅರ್ಧಶತಕದ (50) ನೆರವಿನಿಂದ ಕೇವಲ 6.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ರಾಹುಲ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 19ನೇ ಎಸೆತದಲ್ಲಿ ಔಟ್ ಆದ ರಾಹುಲ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದ್ದವು. ಅಲ್ಲದೆ ರೋಹಿತ್ ಜೊತೆಗೆ ಮೊದಲ ವಿಕೆಟ್‌ಗೆ 29 ಎಸೆತಗಳಲ್ಲಿ 70 ರನ್‌ಗಳ ಜೊತೆಯಾಟ ನೀಡಿದರು.
16 ಎಸೆತಗಳನ್ನು ಎದುರಿಸಿದ ರೋಹಿತ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದರು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ (6) ಹಾಗೂ ನಾಯಕ ವಿರಾಟ್ ಕೊಹ್ಲಿ (2) ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
The final stretch in Group 2 🏃
— T20 World Cup (@T20WorldCup) November 5, 2021
Which team will join Pakistan in the semis? 🤔#T20WorldCup pic.twitter.com/QOPXMnfSBP