ಪುತ್ತೂರು : (ನ.06) ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭವನ ನಿರ್ಮಾಣಕ್ಕೆ ಮೀಸಲಿಟ್ಟ ಜಾಗವನ್ನು ಏಕಾಏಕಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರ ಗಮನಕ್ಕೆ ತರದೇ ಪಹಣಿ ಪತ್ರ ರದ್ದು ಮಾಡಿರುವ ಬಗ್ಗೆ ಸುಮಾರು ಸಮಯಗಳಿಂದ ತಹಶಿಲ್ದಾರ್ ಮತ್ತು ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ.ಜಾ / ಪ.ಪಂ ಮುಖಂಡರ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಹಲವು ಹಿರಿಯ ಮತ್ತು ಕಿರಿಯ ದಲಿತ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ್ ಉಪ್ಪಿನಂಗಡಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸವಣೂರು ಗ್ರಾಮ ಪಂಚಾಯತ್ ಸದಸ್ಯ ಬಾಬು. ಎನ್, ಗಿರಿಧರ್ ನಾಯ್ಕ, ಕಾರ್ಯದರ್ಶಿಯಾಗಿ ಜಗದೀಶ್ ಕಜೆ, ಪದಾಧಿಕಾರಿಗಳಾಗಿ ಶೇಖರ್ ಮಾಡಾವು ರವರನ್ನು ಒಳಗೊಂಡ ಸಮಿತಿಯೊಂದು ಮುನ್ನೆಲೆಗೆ ಬಂದಿದ್ದು ಈ ಸಮಿತಿಯ ನೇತೃತ್ವದಲ್ಲಿ ನವಂಬರ್ 08 ರಂದು ಸೋಮವಾರ 10.30 ಗಂಟೆಗೆ ಸರಿಯಾಗಿ ಮಿನಿ ವಿಧಾನ ಸೌಧ ಮುಂಭಾಗ ರಾಜಕೀಯ ರಹಿತವಾಗಿ “ಪ್ರತಿಭಟನಾ ಧರಣಿ” ನಡೆಯಲಿದೆ ಎಂದು ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಹಿರಿಯ ಮುಖಂಡ ಸೇಸಪ್ಪ ನೆಕ್ಕಿಲು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ಜಗದೀಶ್ ಕಜೆಯವರು ಹಿರಿಯ ದಲಿತ ಮುಖಂಡರಾದ ದಿವಂಗತ ಕೂಸಪ್ಪ, ಶಿವಪ್ಪ ಅಟ್ಟೋಳೆ ಮತ್ತು ಪ್ರಭಾವಿ ದಲಿತ ನಾಯಕ ಶ್ರಿ ಆನಂದ ಮಿತ್ತಬೈಲು ಹಾಗೂ ಇತರ ಹಿರಿಯ ಮುಖಂಡರ 20 ವರ್ಷಗಳ ಹೋರಾಟದ ಫಲವಾಗಿ 2016/2017 ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಆಂಜನೇಯರವರ ಒತ್ತಡಕ್ಕೆ ಮಣಿದು ಆಗಿನ ಸ್ಥಳೀಯ ಶಾಸಕರು 19 ಸೆಂಟ್ಸ್ ಜಾಗ ಸರಕಾರಿ ಆಸ್ಪತ್ರೆಯ ಬಳಿ ಗುರುತಿಸಿದ್ದು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಕಟ್ಟಡ ಉದ್ದೇಶಕ್ಕೆ 2 ಕೋಟಿ ರೂ ಅನುದಾನ ಮಂಜೂರು ಮಾಡಿದ್ದರು.
ಮುಂದಿನ ದಿನಗಳಲ್ಲಿ ಭವನ ನಿರ್ಮಾಣದ ಕುರಿತು ಯಾವುದೇ ಪ್ರಗತಿ ಆಗದೆ ಇದ್ದು ಇತ್ತೀಚೆಗೆ ಸದ್ರಿ ಸ್ಥಳವನ್ನು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದಕ್ಕಾಗಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದ ಪಹಣಿ ಪತ್ರ ಬದಲಾವಣೆಯಾಗಿದ್ಥು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೂ, ಜನಪ್ರತಿನಿಧಿಗಳು ಸಮಸ್ತ ಅಂಬೇಡ್ಕರ್ ಅಭಿಮಾನಿಗಳಿಗೆ ಅನ್ಯಾಯ ಮಾಡಿದ್ದು ಇದರ ವಿರುದ್ಧ “ಪ್ರತಿಭಟನಾ ಧರಣಿ” ಆಯೋಜಿಸಿದ್ದು ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ದಲಿತ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷ ಸೋಮನಾಥ್ ಉಪ್ಪಿನಂಗಡಿ, ರಾಜು ಹೊಸ್ಮಠ, ಬಾಬು ಎನ್. ಸವಣೂರು ಉಪಸ್ಥಿತರಿದ್ದರು.