ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತೊಯ್ದು ಸುದ್ದಿಯಾಗಿದ್ದರು. ರಕ್ಷಿಸಿದ ಒಂದು ದಿನದ ನಂತರದಲ್ಲಿ ಯುವಕ ಸಾವನ್ನಪಿದ್ದಾನೆ.
ಉದಯ ಕುಮಾರ್(25) ಮೃತನಾಗಿದ್ದಾನೆ. ಈತ ಇಂದು ಬೆಳಿಗ್ಗೆ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ಗುರುವಾರ ಟಿ.ಪಿ.ಛಾತಿರಾಮ್‍ನ ಇನ್ಸ್‌ಪೆಕ್ಟರ್ ರಾಜೇಶ್ವರಿ ಅವರು ಉದಯನನ್ನು ರಕ್ಷಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿದ್ದಾನೆ.
ಎಡೆಬಿಡದೆ ಸುರಿದ ಮಳೆಗೆ ಮೈ ಮೇಲೆ ಮರ ಬಿದ್ದು ಯುವಕ ಪ್ರಜ್ಞಾಹೀನನಾಗಿದ್ದನು. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದ ಆಟೋರಿಕ್ಷಾ ಬಳಿಗೆ ತಲುಪಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿ ಪ್ರಜ್ಞಾಹೀನ ವ್ಯಕ್ತಿಯನ್ನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ಹೋಗಿದ್ದಾರೆ. ರಾಜೇಶ್ವರಿ ಅವರು ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಕೊಂಡು ಹೋಗುತ್ತಿದ್ದು, ಆಟೋದಲ್ಲಿ ಇಬ್ಬರನ್ನು ಕೂರಿಸಿ ಈ ವ್ಯಕ್ತಿಯನ್ನು ಬದುಕಿಸಿ, ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಹೋದ್ಯೋಗಿಗಳಿಗೆ ಕೂಗಿ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ. ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ ಅಧಿಕಾರಿಯನ್ನು ಜನರು ಶ್ಲಾಘಿಸಿದ್ದಾರೆ.
ಇನ್ಸ್‌ಪೆಕ್ಟರ್ ರಾಜೇಶ್ವರಿ ಹೇಳಿದ್ದೇನು?:
ನಾನು ಪ್ರಥಮ ಚಿಕಿತ್ಸೆ ನೀಡಿದ ನಂತರ ನಾನು ಅವನನ್ನು ಹೊತ್ತೊಯ್ದಿದ್ದೇನೆ. ಅಲ್ಲಿಗೆ ಒಂದು ಆಟೋ ಬಂತು, ನಾವು ಅವನನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ. ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ, ಅವರ ತಾಯಿ ಅಲ್ಲಿದ್ದರು. ಚಿಂತಿಸಬೇಡಿ ಮತ್ತು ಪೊಲೀಸ್ ಇಲಾಖೆ ಅವರಿಗೆ ಬೆಂಬಲ ನೀಡುತ್ತದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಚಿಕಿತ್ಸೆ ಮುಂದುವರಿದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಇನ್ಸ್‍ಪೆಕ್ಟರ್ ರಾಜೇಶ್ವರಿ ಗುರುವಾರ ಹೇಳಿದ್ದಾರೆ..