ಪುತ್ತೂರು: ನ.9 ರಂದು ರೋಟರಿ ಜಿಲ್ಲೆ3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ಗೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಬಪ್ಪಳಿಗೆ-ಬೈಪಾಸ್ ಆಶ್ಮಿ ಕಂಫರ್ಟ್‌ನಲ್ಲಿ ಸಂಜೆ ನಡೆದ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.
ರೊಟೇರಿಯನ್ಸ್‌ಗಳು ಮೊದಲು ತಮ್ಮ ಕುಟುಂಬ ಹಾಗೂ ಉದ್ಯೋಗವನ್ನು ಗೌರವಿಸಿ ಬಳಿಕ ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕು. ರೋಟರಿ ಸಂಸ್ಥೆಗೆ ಸೇರ್ಪಡೆಯಾದರೆ ಅನೇಕ ರೊಟೇರಿಯನ್ಸ್‌ಗಳ ಫ್ರೆಂಡ್‌ಶಿಪ್ ಆಗುವುದು ಮಾತ್ರವಲ್ಲ ಬಿಸಿನೆಸ್ ಕೂಡ ವೃದ್ಧಿಗೊಳ್ಳಲು ಸಹಕಾರಿಯಾಗುತ್ತದೆ,ರೋಟರಿ ಸೆಂಟ್ರಲ್ ಕ್ಲಬ್ ಹಡೀಲು ಬಿದ್ದ ಗದ್ದೆಯಿಂದ ಭತ್ತದ ಕೃಷಿ, ಗ್ರಾಮೀಣ ಹಾಗೂ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹುಟ್ಟು ಹಾಕಿಕೊಂಡ ಅರಿವು ಕಾರ್ಯಕ್ರಮ, ಸಾಮೆತ್ತಡ್ಕ ಶಾಲೆಯಲ್ಲಿ ಹಣ್ಣುಹಂಪಲುಗಳ ಗಿಡಗಳ ನೆಡುವಿಕೆ, ಔಷಧಿವನ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ. ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವ ಮಧುಮೇಹ ದಿನಾಚರಣೆ, ವಿಶ್ವ ಹೃದಯ ದಿನ, ವಿಶ್ವ ಪೋಲಿಯೋ ನಿರ್ಮೂಲನೆ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ ಎಂದ ಅವರು ರೊಟೇರಿಯನ್ಸ್‌ಗಳು ರೋಟರಿ ಸಂಸ್ಥೆಯ ನಿಧಿ ಇದ್ದಾಗೆ. ರೊಟೇರಿಯನ್ಸ್‌ಗಳು ಸಮಯಪಾಲನೆಗೆ ಮೊದಲಾಗಿ ಆದ್ಯತೆ ನೀಡುವಂತಾಗಬೇಕು. ರೋಟರಿ ಫೌಂಡೇಶನ್‌ಗೆ ಟಿಆರ್‌ಎಫ್ ಮೂಲಕ ನೀಡುವ ದೇಣಿಗೆಯು ವಿಶ್ವದಲ್ಲಿ ಯಾರಿಗಾದರೂ ಫಲಾನುಭವಿಗೆ ಖಂಡಿತಾ ತಲುಪುತ್ತದೆ ಎಂದು ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಹೇಳಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎರವರು ಕ್ಲಬ್ ಬುಲೆಟಿನ್ ರೋಟರಿ ಸೆಂಟ್ರಲ್ ನ್ಯೂಸ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಸೆಂಟ್ರಲ್ ಕ್ಲಬ್ಬಿನ ಸದಸ್ಯರು ಹಡೀಲು ಬಿದ್ದಂತಹ ಗದ್ದೆಯಲ್ಲಿ `ನಿಮ್ಮ ಭೂಮಿ, ನಮ್ಮ ಕೃಷಿ’ ಎಂಬಂತೆ ಭತ್ತದ ಕೃಷಿ ಮಾಡಿ ಆಹಾರವನ್ನು ಒದಗಿಸಿಕೊಡುವ ಮೂಲಕ ನಮ್ಮ ದೇಹಕ್ಕೆ ಶಕ್ತಿಯ ರೂಪದಲ್ಲಿ ಹೊಸ ಚೈತನ್ಯ ಒದಗಿಸಿದ್ದಾರೆ. ಅಲ್ಲದೆ ಈ ಕ್ಲಬ್ ಹಣ್ಣುಹಂಪಲುಗಳ ಗಿಡಗಳ ನೆಡುವಿಕೆ, ಔಷಧಿವನ ನಿರ್ಮಾಣ, ಡ್ರಾಪ್ ಯುವರ್ ಎಂಪ್ಟಿ ಪ್ಲಾಸ್ಟಿಕ್ ಬಾಟಲ್ ಮೂಲಕ ಪರಿಸರಕ್ಕೆ ಹಾಗೂ ಹ್ಯೂಮಾನಿಟಿಗೆ ಜೀವ ತುಂಬುವ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು.
ರೋಟರಿ ವಲಯ ಕಾರ್ಯದರ್ಶಿ ಅಬ್ಬಾಸ್ ಮುರ ಮಾತನಾಡಿ, ರೋಟರಿ ಸೆಂಟ್ರಲ್ ಕ್ಲಬ್ ತಮ್ಮು ಮೂರು ವರ್ಷಗಳ ಕಿರು ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನಿಜಕ್ಕೂ ಮನೆಮಾತಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಹೆಚ್ಚಿನ ಅವಾರ್ಡ್ ಪಡೆಯುವ ಕ್ಲಬ್ ಆಗಿ ಮೂಡಿ ಬರಲಿ ಎಂಬುದು ನಮ್ಮ ಹಾರೈಕೆಯಾಗಿದೆ ಎಂದರು.ವಲಯ ಸೇನಾನಿ ಜಯಂತ ಶೆಟ್ಟಿ ಕೆ.ರವರು ಮಾತನಾಡಿ, ರೋಟರಿ ಸೆಂಟ್ರಲ್ ಕ್ಲಬ್‌ನಲ್ಲಿ ಆರುವತ್ತು ಮಂದಿ ಸಮಾನ ಮನಸ್ಕರ ತಂಡವಿದ್ದು, ಕ್ಲಬ್‌ನ ಪ್ರತಿಯೊಂದು ಚಟುವಟಿಕೆಗಳಲ್ಲಿ ನಿರಂತರವಾಗಿ ಕೈಜೋಡಿಸುತ್ತಿರುವುದು ಕ್ಲಬ್‌ನ ವಿಶೇಷತೆ. ಕೊರೋನಾ ಸಂದರ್ಭದಲ್ಲೂ ಈ ಸೆಂಟ್ರಲ್ ಕ್ಲಬ್ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಜಿಲ್ಲಾ ಗವರ್ನರ್‌ರವರ ಮೂಲಕ ಅಭಿನಂದನೆಯನ್ನು ಗಳಿಸಿರುವುದು ಕ್ಲಬ್‌ನ ಉತ್ತುಂಗಕ್ಕೆ ಸಾಕ್ಷಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ನವೀನ್‌ಚಂದ್ರ ನಾಕ್‌ರವರು ಸ್ವಾಗತಿಸಿ ಮಾತನಾಡಿ, ಪದಗ್ರಹಣ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸುವ ಅನಿವಾರ್ಯತೆ, ಕ್ಲಬ್ ಸದಸ್ಯರ ಹಾಗೂ ಬೆರಳೆಣಿಕೆಯ ಹಿತೈಷಿಗಳ ಮಧ್ಯೆ ಪದಗ್ರಹಣ ನಡೆಸಲಾಗಿತ್ತು. ಹಳೆ ಬೇರು, ಹೊಸ ಚಿಗುರು ಎಂಬಂತೆ ಕ್ಲಬ್‌ನಲ್ಲಿನ ಹಿರಿಯ-ಕಿರಿಯ ಸದಸ್ಯರೊಡಗೂಡಿ ಕ್ಲಬ್‌ನ ಚಟುವಟಿಕೆಗಳು ಹಾಗೂ ರೋಟರಿ ಜಿಲ್ಲಾ ಪ್ರಾಜೆಕ್ಟ್‌ಗಳನ್ನು ಉತ್ಸಾಹದಿಂದ ಮುಂದುವರೆಸಲಿದ್ದೇವೆ. ಟೀಚ್ ಯೋಜನೆಯಡಿ ಇದೀಗ ವಿದ್ಯಾರ್ಥಿಗಳ ಆಭ್ಯುದಯಕ್ಕೆ ಅರಿವು ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಕ್ಲಬ್‌ನಲ್ಲಿನ ಸದಸ್ಯರ ಸಹಕಾರ ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಸಾಗಲಿ ಎಂದರು.
ಸದಸ್ಯರ ಸೇರ್ಪಡೆ:ಕ್ಲಬ್ ಸರ್ವಿಸ್‌ನಡಿಯಲ್ಲಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾಗಾರಾಜು ಎನ್.ಡಿ, ಬೊಳ್ವಾರು ಪದ್ಮ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಪದ್ಮನಾಭ ಶೆಟ್ಟಿ, ನೆಹರುನಗರ ಮಾರುತಿ ಇಂಜಿನಿಯರಿಂಗ್ ವರ್ಕ್ಸ್‌ನ ಮಾಲಕ ಅನಿಮೋನ್ ಎ, ಬಿಎಸ್‌ಎನ್‌ಎಲ್‌ನ ಟೆಲಿಕಾಂ ಟೆಕ್ನೇಶಿಯನ್ ಕೆ.ಸಾವಿತ್ರಿ ಉಮೇಶ್‌ರವರನ್ನು ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ರೋಟರಿ ಪಿನ್ ತೊಡಿಸಿ, ಪ್ರಮಾಣಪತ್ರ ನೀಡಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಅಶೋಕ್ ನಾಯ್ಕರವರು ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಅಭಿನಂದನೆ:ರಾಮಕೃಷ್ಣ ಸೇವಾಶ್ರಮಕ್ಕೆ ರೂ.12 ಸಾವಿರ ದೇಣಿಗೆ ನೀಡಿದ ಪುತ್ತೂರಿನ ರೋಟರಿ ಭೀಷ್ಮರೆಂದೇ ಹೆಸರು ಗಳಿಸಿದ ಕೆ.ಆರ್ ಶೆಣೈ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಎರಡು ಸೆಟ್ ಡೆಸ್ಕ್ ಕೊಡುಗೆ ನೀಡಿದ್ದು ಅಲ್ಲದೆ ನಿಮ್ಮ ನೆಲ, ನಮ್ಮ ಕೃಷಿ ಯೋಜನೆಯಲ್ಲಿ ಸತತ ಎರಡು ವರ್ಷ ಮುಂಚೂಣಿಯಲ್ಲಿದ್ದು ಸಹಕರಿಸಿದ ರೋಟರಿ ಸೆಂಟ್ರಲ್ ಸದಸ್ಯ ಅಶ್ರಫ್ ಮುಕ್ವೆ ಮತ್ತು ಅವರ ಪುತ್ರ ಹಫೀಜ್ ರೆಹಮಾನ್, ಮತ್ತು ರೋಟರಿ ಇಂಡಿಯಾ ಲಿಟರೆಸಿ ಮಿಶನ್‌ನ ಸಮಗ್ರ ಯೋಜನೆಯಾದ ಟೀಚ್ ಶೀರ್ಷಿಕೆಯಡಿಯಲ್ಲಿ ಸರಕಾರಿ ಹಾಗೂ ಗ್ರಾಮೀಣ ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಸರ್ವತೋಮುಖವಾಗಿ ಬಲಗೊಳಿಸುವ ಒಂದು ದೀರ್ಘಕಾಲಿಕ ಯೋಜನೆ ಹಾಗೂ ವಿವೇಕದ ಕಡೆಗೆ, ಲೋಕಜ್ಞಾನದ ಕಡೆಗೆ ಕರೆದೊಯ್ಯವ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ವಹಿಸುವ ಕ್ಲಬ್ ಸದಸ್ಯರಾದ ಹಾಗೂ ಸುದ್ದಿ ಆನ್‌ಲೈನ್ ಜನಾಭಿಪ್ರಾಯದ ಮೂಲಕ ಉತ್ತಮ ಕಂದಾಯ ಇಲಾಖಾಧಿಕಾರಿ ಪ್ರಶಸ್ತಿ ಗಳಿಸಿದ ಪುತ್ತೂರಿನ ತಹಶೀಲ್ದಾರ್ ರಮೇಶ್ ಬಾಬು, ತುಳು ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಜೇಸಿ ತರಬೇತುದಾರ ಡಾ|ರಾಜೇಶ್ ಬೆಜ್ಜಂಗಳ, ರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಡಾ|ರಾಮಚಂದ್ರ ಕೆ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಸೋಸಿಯೆಟ್ ಪ್ರೊಫೆಸರ್ ಶಿವರಾಮ ಎಂ.ಎಸ್, ನ್ಯಾಯವಾದಿ ಚಿದಾನಂದ ರೈ, ನುರಿತ ಕೌನ್ಸೆಲ್ಲರ್ ರಾಕೇಶ್ ಪಿ.ಶೆಟ್ಟಿ, ಫಿಲೋಮಿನಾ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಭಾರತಿ ಎಸ್.ರೈ, ಆಶ್ಮಿ ಕಂಫರ್ಟ್‌ನಲ್ಲಿ ಕ್ಲಬ್ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಕೈಜೋಡಿಸುತ್ತಿರುವ ಆಶ್ಮಿ ಕಂಫರ್ಟ್ ಸಿಬ್ಬಂದಿ ಲಿಖಿತ್‌ರವರಿಗೆ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರು ಹೂ ನೀಡಿ ಅಭಿನಂದಿಸಿದರು.
ಟಿಆರ್‌ಎಫ್ ದೇಣಿಗೆ:ಅಂತರ್ರಾಷ್ಟ್ರೀಯ ಸರ್ವಿಸ್‌ನಡಿಯಲ್ಲಿ ರೋಟರಿ ಫೌಂಡೇಶನ್‌ಗೆ ರೋಟರಿ ಸೆಂಟ್ರಲ್ ಸದಸ್ಯರು ಜೊತೆಗೂಡಿ ರೂ.3 ಸಾವಿರ ಡಾಲರ್ ಅನ್ನು ಟಿಆರ್‌ಎಫ್ ದೇಣಿಗೆ ನೀಡಿದ ಕುರಿತು ಅಲ್ಲದೆ ಕ್ಲಬ್ ಅಧ್ಯಕ್ಷ ನವೀನ್‌ಚಂದ್ರ ನಾಕ್ ಹಾಗೂ ಸದಸ್ಯ ರಾಕೇಶ್ ಶೆಟ್ಟಿರವರು ಪಿಎಚ್‌ಎಫ್ ಪದವಿಗೆ ಭಾಜನರಾಗಿದ್ದಾರೆ ಎಂದು ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ಸನತ್ ರೈಯವರು ಹೇಳಿದರು. ಪಿಎಚ್‌ಎಫ್ ಪದವಿಗೆ ಭಾಜನರಾದ ನವೀನ್‌ಚಂದ್ರ ನಾಕ್ ಹಾಗೂ ರಾಕೇಶ್ ಶೆಟ್ಟಿಯವರು ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಅಭಿನಂದಿಸಿದರು.
ಸ್ಕಾಲರ್‌ಶಿಪ್ ಹಸ್ತಾಂತರ:ಕಳೆದ ವರ್ಷ ಅಗಲಿದ ಕ್ಲಬ್ ಸದಸ್ಯ ಹಾಗೂ ಉಪ ತಹಶೀಲ್ದಾರ್ ಆಗಿ ಪುತ್ತೂರು, ಸುಳ್ಯದಲ್ಲಿ ಕಾರ್ಯ ನಿರ್ವಹಿರುವ ಶ್ರೀಧರ್ ಕೋಡಿಜಾಲ್‌ರವರ ನೆನಪಿಗಾಗಿ ಧತ್ತಿನಿಧಿ ಸ್ಥಾಪಿಸಲಾಗಿದ್ದು, ಈ ಧತ್ತಿನಿಧಿಯಿಂದ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಈ ಬಾರಿ ರಶ್ಮಿ ರಾವ್‌ರವರು ಶ್ರೀಧರ್ ಕೋಡಿಜಾಲ್ ಧತ್ತಿನಿಧಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಅದರಂತೆ ಕ್ಲಬ್ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿರವರು ಶ್ರೇಯ, ಸಾಬಿದಾ ಬಾನು, ಶ್ರಾವ್ಯರವರಿಗೆ ಸ್ಕಾಲರ್‌ಶಿಪ್ ನೀಡುತ್ತಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಸ್ಕಾಲರ್‌ಶಿಪ್‌ನ್ನು ಹಸ್ತಾಂತರಿಸಿದರು.
ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿರವರು ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಧ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ರೋಟರಿ ಕ್ಲಬ್‌ನಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿದದವರನ್ನು ಗುರುತಿಸಿ ಅಭಿನಂದಿಸಿದರು. ಕ್ಲಬ್ ಸದಸ್ಯ ರಾಕೇಶ್ ಶೆಟ್ಟಿ ಪ್ರಾರ್ಥಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ವೆಂಕಟ್ರಾಜ್ ಪಿ.ಜಿ, ನಿಯೋಜಿತ ಅಧ್ಯಕ್ಷ ರಫೀಕ್ ರೋಯಲ್ ದರ್ಬೆರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ|ರಾಜೇಶ್ ಬೆಜ್ಜಂಗಳ ವಂದಿಸಿದರು. ಬುಲೆಟಿನ್ ಎಡಿಟರ್ ಭಾರತಿ ಎಸ್.ರೈ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರರವರು ಕಾರ್ಯಕ್ರಮ ನಿರೂಪಿಸಿದರು.
ಡಿ.ಜಿ ಸಹಿತ ನಾಲ್ವರಿಗೆ ಸನ್ಮಾನ:1998ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡು,2009ರಿಂದ ಪುತ್ತೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನಪರ ಮತ್ತು ಜನಸ್ನೇಹಿ ಸೇವೆಯಿಂದ ಗುರುತಿಸಿಕೊಂಡಿರುವ ಸುಳ್ಯ ತಾಲೂಕಿನ ಸೋಣಂಗೇರಿಯ ಕುಸುಮಾ, ತೆಂಗಿನಮರ ಮತ್ತು ಅಡಿಕೆ ಮರ ಏರಿ ಕಾಯಿ ಕೀಳುವ ಸ್ವಾಭಿಮಾನದ ಮತ್ತು ಸಾಹಸಕಾಯಕವನ್ನು ಮೆರೆಯುವ ಮೂಲಕ ಸ್ವ-ಉದ್ಯೋಗದಿಂದ ಜೀವನ ನಿರ್ವಹಿಸುವ ದ.ಕ ಜಿಲ್ಲೆಯ ಅರಿಯಡ್ಕ-ಶೇಖಮಲೆ ನಿವಾಸಿ ಲಕ್ಷ್ಮೀ ರಾಜೇಶ್, 1998ರಿಂದ ಚಿಕ್ಕಮಗಳೂರು, ಸುಳ್ಯ ಹಾಗೂ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ 25 ವರ್ಷಗಳಿಂದ ಜನಪರ, ಜನಸ್ನೇಹಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಚಂದ್ರಿಕಾ ಎಸ್.ಕೆ, ಅಲ್ಲದೆ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಒಕೇಶನಲ್ ಸರ್ವಿಸ್ ನಿರ್ದೇಶಕ ಚಂದ್ರಹಾಸ ರೈಯವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮಗಳು:ಬೆಳಿಗ್ಗೆ ಬಪ್ಪಳಿಗೆ-ಬೈಪಾಸ್ ಆಶ್ಮಿ ಕಂಫರ್ಟ್ ಬಳಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರನ್ನು ಸ್ವಾಗತಿಸಲಾಯಿತು. ಬಳಿಕ ಸಾಮೆತ್ತಡ್ಕ ಶಾಲೆಯಲ್ಲಿ ವಿವಿಧ ಕಾರ್ಯಕ್ರಮ, ಕ್ವೀನ್ ಗ್ರೀನ್ ಸ್ಕೂಲ್ ಕ್ಯಾಂಪಸ್ ಉದ್ಘಾಟನೆ, ಓಪನ್ ವೇದಿಕೆಗೆ ಶಂಕು ಸ್ಥಾಪನೆ, ಕೈತೋಟ, ಔಷಧಿವನಗಳ ಉದ್ಘಾಟನೆ, ಅಪರಾಹ್ನ ಬೈಪಾಸ್-ತೆಂಕಿಲ ಎನ್.ಎಚ್ ಎಂಟರ್‌ಪ್ರೈಸಸ್ ಬಳಿ ಡ್ರಾಪ್ ಯುವರ್ ಎಂಪ್ಟಿ ಪ್ಲಾಸ್ಟಿಕ್ ಬಾಟಲ್ ಕಾರ್ಯಕ್ರಮ ಉದ್ಘಾಟನೆ, ಆಶ್ಮಿ ಬಳಿ ಡ್ರಾಪ್ ಯುವರ್ ಎಂಪ್ಟಿ ಪ್ಲಾಸ್ಟಿಕ್ ಬಾಟಲ್ ಕಾರ್ಯಕ್ರಮ ಉದ್ಘಾಟನೆ, ಆಶ್ಮಿಯಲ್ಲಿ ಹೊಸ ಅಕ್ಕಿ ಊಟ, ಕ್ಲೋಸ್ ಡೋರ್ ಮೀಟಿಂಗ್, ಕ್ಲಬ್ ಅಸೆಂಬ್ಲಿ ಕಾಯಕ್ರಮಗಳಲ್ಲಿ ಜಿಲ್ಲಾ ಗವರ್ನರ್ ರವೀಂದ್ರ ಭಟ್‌ರವರು ಭಾಗವಹಿಸಿದರು.
ವೃತ್ತಿ ಮಾರ್ಗದರ್ಶನ/ಕೌನ್ಸಿಲಿಂಗ್ ಸೆಂಟರ್ ಉದ್ಘಾಟನೆ:ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಯುವ ಸಮೂಹಕ್ಕೆ ವೃತ್ತಿಪರ ಕೋರ್ಸ್‌ಗಳ ಕುರಿತು ಮಾಹಿತಿ ನೀಡಲು `ವೃತ್ತಿ ಮಾರ್ಗದರ್ಶನ ಸೆಂಟರ್’ ಮತ್ತು ಮನುಷ್ಯ ತನ್ನ ದೇಹ ಹಾಗೂ ಮನಸ್ಸನ್ನು ಹೇಗೆ ಸ್ಥಿಮಿತದಲ್ಲಿಟ್ಟುಕೊಳ್ಳುವುದು ಹೇಗೆ ಎಂಬ ಕುರಿತು `ಕೌನ್ಸಿಲಿಂಗ್ ಸೆಂಟರ್’ ಇವನ್ನು ರೋಟರಿ ಜಿಲ್ಲಾ ಗವರ್ನರ್ ಎ.ಆರ್ ರವೀಂದ್ರ ಭಟ್‌ರವರು ಅನಾವರಣಗೊಳಿಸಿದರು. ಇವೆರಡೂ ಪ್ರತಿ ಮಂಗಳವಾರ ದಿನದಂದು ಆಶ್ಮಿ ಕಂಪರ್ಟ್‌ನಲ್ಲಿ ಜರಗಲಿರುವುದು. ವೃತ್ತಿ ಮಾರ್ಗದರ್ಶನ ಕುರಿತು ಡಾ.ರಾಮಚಂದ್ರ ಹಾಗೂ ಕೌನ್ಸಿಲಿಂಗ್ ಸೆಂಟರ್ ಕುರಿತು ರಾಕೇಶ್ ಶೆಟ್ಟಿರವರು ಮಾಹಿತಿ ನೀಡಿದರು.