ನವದೆಹಲಿ: ಚರ್ಮದ ಸಂಪರ್ಕವಿಲ್ಲದೆ ಸ್ತನ ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಇಂದು ಸುಪ್ರೀಂಕೋರ್ಟ್ ವಜಾ ಮಾಡಿದೆ.
ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ತ್ರಿ ಸದಸ್ಯ ಪೀಠವು ಪೋಕ್ಸೊ ಅಡಿಯಲ್ಲಿ ‘ಲೈಂಗಿಕ ದೌರ್ಜನ್ಯ’ದ ಅಪರಾಧದ ಅಂಶವು ಲೈಂಗಿಕ ಉದ್ದೇಶವಾಗಿದೆ ಮತ್ತು ಅಂತಹ ಘಟನೆಗಳಲ್ಲಿ ಚರ್ಮದಿಂದ ಚರ್ಮದ ಸಂಪರ್ಕವು ಪ್ರಸ್ತುತವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಲೈಂಗಿಕ ದೌರ್ಜನ್ಯದ ಅಪರಾಧವನ್ನು ರೂಪಿಸುವ ಪ್ರಮುಖ ಅಂಶವೆಂದರೆ ಲೈಂಗಿಕ ಉದ್ದೇಶವೇ ಹೊರತು ಮಗುವಿನೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಅಲ್ಲ, “ಚರ್ಮದಿಂದ ಚರ್ಮ” ಸಂಪರ್ಕವನ್ನು ಕಡ್ಡಾಯಗೊಳಿಸುವುದು ಸಣ್ಣ ಮತ್ತು ಅಸಂಬದ್ಧ ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಲೈಂಗಿಕ ಉದ್ದೇಶದಿಂದ ಮಗುವಿನ ಯಾವುದೇ ಲೈಂಗಿಕ ಭಾಗವನ್ನು ಸ್ಪರ್ಶಿಸುವ ಯಾವುದೇ ಕ್ರಿಯೆಯನ್ನು ಪೋಕ್ಸೋ ಕಾಯಿದೆಯ ಸೆಕ್ಷನ್ 7 ರ ವ್ಯಾಪ್ತಿಯಿಂದ ತೆಗೆದು ಹಾಕಲಾಗುವುದಿಲ್ಲ ಎಂದು ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣ ಹಿನ್ನಲೆ:ಮುಂಬೈನಲ್ಲಿ 12ರ ಬಾಲಕಿ ಮೇಲೆ ವ್ಯಕ್ತಿಯೋರ್ವ ಲೈಗಿಂಕ ದೌರ್ಜನ್ಯ ಎಸಗಿದ್ದ, ಆಕೆಯ ಬಟ್ಟೆಯ ಮೇಲೆ ಸ್ತನಗಳನ್ನು ಸ್ಪರ್ಶಿಸುವ ಮೂಲಕ ಬಾಲಕಿಯನ್ನು ಉದ್ರೇಕಿಸುವ ಪ್ರಯತ್ನ ಮಾಡಿದ್ದ. ಇದನ್ನು ವಿರೋಧಿಸಿದ್ದ ಬಾಲಕಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‍ನ ನ್ಯಾಯಮೂರ್ತಿ ಪುಷ್ಪಾ.ವಿ ಗಣೆಡಿವಾಲಾ ಪೀಠ, 12 ವರ್ಷದ ಮಗುವಿನ ಸ್ತನವನ್ನು ಬಟ್ಟೆ ತೆಗೆಯದೆ ಒತ್ತುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ಅಡಿಯಲ್ಲಿ ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವ ವ್ಯಾಖ್ಯಾನದೊಳಗೆ ಬರುತ್ತದೆ ಮತ್ತು ಪೋಕ್ಸೋ ಅಡಿಯಲ್ಲಿ ಲೈಂಗಿಕ ದೌರ್ಜನ್ಯವಲ್ಲ ಎಂದು ಹೇಳಿತ್ತು. ಅಲ್ಲದೇ ಸಂತ್ರಸ್ತ ಬಾಲಕಿ ಬಟ್ಟೆಯನ್ನು ಧರಿಸಿದ್ದಳು ಮತ್ತು ಆಕೆಯ “ಚರ್ಮದಿಂದ ಚರ್ಮಕ್ಕೆ” ಯಾವುದೇ ಸಂಪರ್ಕವಿಲ್ಲದ ಕಾರಣಕ್ಕಾಗಿ ಪೋಕ್ಸೊದ ಸೆಕ್ಷನ್ 7 ರ ಅಡಿಯಲ್ಲಿ ಆರೋಪಿತ ವ್ಯಕ್ತಿಯನ್ನು ಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪರಿಶೀಲಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಸ್ವಯಂಪ್ರೇರಿತವಾಗಿ ಈ ವಿಷಯವನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪಿಸಿದ್ದರು, ಇದನ್ನು ತುಂಬಾ ಗೊಂದಲದ ತೀರ್ಮಾನ ಎಂದು ಬಣ್ಣಿಸಿದ ಸುಪ್ರೀಂಕೋರ್ಟ್ ಕಳೆದ ಜನವರಿ 27 ರಂದು ವಿವಾದಾತ್ಮಕ ತೀರ್ಪಿಗೆ ತಡೆ ನೀಡಿತ್ತು. ತರುವಾಯ, ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ 30 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.