ಮಂಗಳೂರು: ಇತ್ತೀಚೆಗೆ ಕೂಳೂರಿನಲ್ಲಿ ನಡೆದ ನಾಗ ಬನಕ್ಕೆ ಹಾನಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾವೂರಿನೂ ಪ್ರವೀಣ್, ಅನಿಲ್ ಮೊಂತೇರೊ , ನಿಖಿಲೇಶ್, ಜಯಕುಮಾರ್, ಪ್ರತೀಕ್ , ಮಂಜುನಾಥ್ ಸಫ್ಘಾನ್ , ಸುಹೈಬ್ ಮತ್ತು ನೌಶಾದ್ ಎಂದು ಗುರುತಿಸಲಾಗಿದೆ.
ಇವರು ಕೋಡಿಕಲ್ ನಲ್ಲಿ ನಡೆದಿದ್ದ ನಾಗಬನದ ಹಾನಿ ಪ್ರಕರಣದ ಆರೋಪಿಗಳು ಕೂಡ ಆಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 13 ರಂದು ಕೋಡಿಕಲ್ ಮತ್ತು ಅಕ್ಟೋಬರ್ 23 ರಂದು ಕುಳೂರಿನಲ್ಲಿ ದುಷ್ಕರ್ಮಿಗಳು ಆಯುಧಗಳನ್ನು ಬಳಸಿ, ನಾಗನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ , ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು . ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ . ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದರು .