ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1 ರಿಂದ 20ರ ತನಕ ಒಟ್ಟು 1,538 ಮಂದಿಗೆ ಕೊರೋನ ಸೋಂಕು ದೃಡಪಟ್ಟಿದೆ. ಇದರಲ್ಲಿ ಅಚ್ಚರಿ ಎಂಬಂತೆ ಲಸಿಕೆ ಪಡೆದ 1,254 ಮಂದಿಗೂ ಕೊರೋನ ಸೋಂಕು ವಕ್ಕರಿಸಿದೆ.
ಒಟ್ಟು ಸೋಂಕಿನಲ್ಲಿ ಶೇ. 72 ರಷ್ಟು ಮಂದಿ ಲಸಿಕೆ ಪಡೆದವರು ಎಂದು ತಿಳಿದು ಬಂದಿದೆ.
ಲಸಿಕೆ ಪಡೆದ 655 ಮಂದಿಗೆ ಸರಿಯಾಗಿ 100 ದಿನಗಳ ಬಳಿಕ ಕೊರೋನ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ. ಲಸಿಕೆ ಹಾಕಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದ ಲಕ್ಷಾಂತರ ಮಂದಿಯಲ್ಲಿ ಮತ್ತೆ ಚಿಂತೆ ಆವರಿಸಿದೆ.
ಕೊರೋನ ಚಿಂತೆ ಒಂದು ಕಡೆಯಾದರೆ ಹೊಸ ರೂಪಾಂತರಿ ತಳಿ ಒಮಿಕ್ರಾನ್ (B.1.1529) ಪತ್ತೆ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಹೊಸ ತಳಿ ಹೆಚ್ಚು ವೇಗವಾಗಿ ಹರಡಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿರುವುದರಿಂದ ರಾಜ್ಯದಾದ್ಯಂತ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ. ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರಗೊಳಿಸುವ ಬಗ್ಗೆ ತಜ್ಞರು ಎಚ್ಚರಿಸಿದ್ದು, ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
‘ಕೇರಳ, ಮಹಾರಾಷ್ಟ್ರದಿಂದ ಬರುವವರು 72 ಗಂಟೆಗಳ ಅವಧಿ ಮೀರಿರದ ಕೋವಿಡ್ ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಕಳೆದ 15 ದಿನಗಳ ಅವಧಿಯಲ್ಲಿ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಪಡಬೇಕು. ಅಲ್ಲಿಂದ ಈಗ ಬಂದ ವಿದ್ಯಾರ್ಥಿಗಳಿಗೆ 7 ದಿನಗಳ ಬಳಿಕ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು. ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾದ ಶಿಕ್ಷಣ ಸಂಸ್ಥೆಗಳಲ್ಲಿ ಸೋಂಕಿತರಾಗಿರದ ವಿದ್ಯಾರ್ಥಿಗಳನ್ನೂ ಕ್ವಾರಂಟೈನ್‌ಗೆ ಒಳಪಡಿಸಿ, 7 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು’ ಎಂದು ಸೂಚಿಸಿದ್ದಾರೆ.
‘ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲರನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ಶಿಕ್ಷಣ, ವ್ಯಾಪಾರ– ವ್ಯವಹಾರದ ಸಂಬಂಧ ಕೇರಳದಿಂದ ಇಲ್ಲಿಗೆ ಪ್ರತಿನಿತ್ಯ ಬರುವವರು ಕೋವಿಡ್ ಆರ್‌ಟಿ– ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು. ಒಮ್ಮೆ ನಡೆಸಲಾದ ಪರೀಕ್ಷೆಯ ವರದಿಯನ್ನು 14 ದಿನಗಳವರೆಗೆ ಗಡಿಯಲ್ಲಿ ಹಾಜರುಪಡಿಸಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.